ತಾಯಿ ಮರಣ ತಡೆಗಟ್ಟಲು ಕ್ರಮವಹಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ನಿರ್ದೇಶನ

ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • 2026ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಏಳು ಜನ ತಾಯಂದಿರ ಮರಣ
  • ಇದನ್ನು ತಡೆಗಟ್ಟಲು ಅಗತ್ಯ ಮತ್ತು ಮುಂಜಾಗ್ರತೆ ಕ್ರಮ ವಹಿಸಿ
ಮಂಡ್ಯ: ಜಿಲ್ಲೆಯಲ್ಲಿ ತಾಯಿ ಮರಣ ತಡೆಗಟ್ಟಲು ಹಾಗೂ ಶೂನ್ಯಕ್ಕೆ ತರುವಂತೆ ಪ್ರಾಥಮಿಕ ವೈದ್ಯಾಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಯಿ ಮರಣ ಕಾರಣ ಅಂತರಿಕ ಪರಿಶೋಧನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2026ನೇ ಸಾಲಿನಲ್ಲಿ 7 ತಾಯಿ ಮರಣ ಆಗಿದೆ. ತಾಯಿ ಮರಣವನ್ನು ತಡೆಗಟ್ಟಲು ಪ್ರಾಥಮಿಕ ವೈದ್ಯಾಧಿಕಾರಿಗಳು ಅಗತ್ಯ ಕ್ರಮ ಮತ್ತು ಮುಂಜಾಗ್ರತೆ ಕ್ರಮ ವಹಿಸಿ ಹಾಗೂ ಪ್ರಾಥಮಿಕ ಪರೀಕ್ಷೆಯನ್ನು ಸರಿಯಾಗಿ ಮಾಡಬೇಕು ಮತ್ತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ಮೊದಲ ಆದ್ಯತೆ ನೀಡಬೇಕು. ಪ್ರತಿಯೊಂದು ತಾಯಿ ಮರಣ ಪ್ರಕರಣಗಳ ಪ್ರಮಾಣವನ್ನು ಗಂಭೀರವಾಗಿ ಪರಿಗಣಿಸಿ. ನ್ಯೂನ್ಯತೆಗಳನ್ನು ಗುರುತಿಸಿ ಮರಣ ಪ್ರಮಾಣವನ್ನು ತಡೆಗಟ್ಟಬೇಕು. ಗರ್ಭಿಣಿಯರಿಗೆ ಉತ್ತಮ ಗುಣಮಟ್ಟದ ಪ್ರಸೂತಿ ಆರೈಕೆ ಮಾಡಬೇಕು. ಗರ್ಭಿಣಿಯರ ಆರೋಗ್ಯ ತಪಾಸಣೆಯನ್ನು ಕಾಲಕಾಲಕ್ಕೆ ಮಾಡಬೇಕು. ಜಿಲ್ಲೆಯಲ್ಲಿ ಕ್ಷೇತ್ರ ಮಟ್ಟದ ಆಯಾ ಪ್ರದೇಶ ಪಟ್ಟಣಗಳಲ್ಲಿ ತುರ್ತು ವಾಹನಗಳ ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ಮಾಡಬೇಕು ಎಂದು ಹೇಳಿದರು.
ಗರ್ಭಿಣಿಯರ ಪ್ರಸವ ಪೂರ್ವ ಮತ್ತು ಪ್ರಸವ ನಂತರ ಬೇಕಾದ ಕ್ರಮ ವಹಿಸಿ ಹಾಗೂ ಜಾಗೃತಿ ಮೂಡಿಸಬೇಕು. ತಾಯಿ ಕಾರ್ಡ್ ಮಾಹಿತಿಯ ಅನುಸಾರ ಸಮಯಕ್ಕೆ ಸರಿಯಾಗಿ ಮಹಿಳೆಯರಿಗೆ ರಕ್ತಹೀನತೆ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಸಮರ್ಪಕವಾಗಿ ಒದಗಿಸಬೇಕು. ಗರ್ಭಿಣಿ ತಾಯಂದಿರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರಗಳ ಸಮನ್ವಯತೆಯಿಂದ ತಾಯಿ ಮರಣ ತಡೆಗಟ್ಟಲು ಆರೋಗ್ಯ ಇಲಾಖೆ ಎಲ್ಲ ವೈದ್ಯರು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಕೆ.ಮೋಹನ್, ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬೆಟ್ಟಸ್ವಾಮಿ, ಆರ್‌ಸಿಎಚ್ ಅಧಿಕಾರಿ ಡಾ.ಕೆ.ಪಿ.ಅಶ್ವಥ್, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಎಂ.ಎನ್.ಆಶಾಲತಾ, ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ಸೋಮಶೇಖರ್, ಟಿಎಚ್‌ಒ ಡಾ.ಜವರೇಗೌಡ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಜಿ.ವೇಣುಗೋಪಾಲ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net