ಪ್ರತಿಯೊಬ್ಬರೂ ಪರಸ್ಪರ ಧರ್ಮಗಳ ಆಚರಣೆ ಗೌರವಿಸಿ

 ಸೋಮವಾರಪೇಟೆ ಜಲಾಲಿಯ ಮಸೀದಿಯಲ್ಲಿ ನಡೆದ ರಂಜಾನ್ ಇಪ್ತಾರ್ ಕೂಟದಲ್ಲಿ ವಿವಿಧ ಸಮುದಾಯಗಳ ಪ್ರಮುಖರು ಭಾಗವಹಿಸಿದ್ದರು.
ಸೋಮವಾರಪೇಟೆ ಜಲಾಲಿಯ ಮಸೀದಿಯಲ್ಲಿ ನಡೆದ ರಂಜಾನ್ ಇಪ್ತಾರ್ ಕೂಟದಲ್ಲಿ ವಿವಿಧ ಸಮುದಾಯಗಳ ಪ್ರಮುಖರು ಭಾಗವಹಿಸಿದ್ದರು.
Published on
ಸೋಮವಾರಪೇಟೆ: ಭಾರತವು ಹಲವು ಧರ್ಮಗಳು, ಸಂಸ್ಕೃತಿಗಳು ಹಾಗೂ ಪರಂಪರೆಗಳು ಒಟ್ಟಾಗಿ ಬದುಕುತ್ತಿರುವ ದೇಶವಾಗಿದೆ. ಪ್ರತಿಯೊಬ್ಬರೂ ಪರಸ್ಪರ ಧರ್ಮಗಳ ಆಚರಣೆಗಳನ್ನು ಗೌರವಿಸುವುದು ಸಮಾಜದಲ್ಲಿ ಸೌಹಾರ್ದತೆ ಹಾಗೂ ಶಾಂತಿ ಕಾಪಾಡಲು ಅಗತ್ಯವಾಗಿದೆ ಎಂದು ಶಾಸಕ ಡಾ.ಮಂತರ್‌ಗೌಡ ಅಭಿಪ್ರಾಯಪಟ್ಟರು.
ರಂಜಾನ್ ಹಬ್ಬದ ಪ್ರಯುಕ್ತ ಪಟ್ಟಣದ ಜಲಾಲಿಯ ಮಸೀದಿಯಲ್ಲಿ ಭಾನುವಾರ ಸಂಜೆ ಅಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿ, ಜನಪ್ರತಿನಿಧಿಗಳಾಗಿ ಎಲ್ಲ ಧರ್ಮಗಳ ಧಾರ್ಮಿಕ ಆಚರಣೆಗಳನ್ನು ಗೌರವಿಸುವುದು ಮತ್ತು ಸಮುದಾಯಗಳ ನಡುವಿನ ಸಾಮರಸ್ಯವನ್ನು ಬೆಳೆಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ಉಪವಾಸದ ಮೂಲಕ ದೈಹಿಕ ಮತ್ತು ಮಾನಸಿಕ ಶುದ್ಧತೆಯನ್ನು ಪಡೆಯುವುದರ ಜತೆಗೆ ಬಡವರು ಹಾಗೂ ಅಗತ್ಯವಿರುವವರಿಗೆ ನೆರವಾಗುವ ಸಂದೇಶವನ್ನು ರಂಜಾನ್ ನೀಡುತ್ತದೆ ಎಂದರು.
ಮಡಿಕೇರಿ ಕ್ಷೇತ್ರದ ವಿವಿಧ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸರ್ಕಾರದಿಂದ ಇನ್ನೂ ಹೆಚ್ಚಿನ ನೆರವು ಒದಗಿಸಲಾಗುವುದು. ಮಸೀದಿ, ಶಾದಿ ಮಹಲ್ ಹಾಗೂ ಮದರಸಾಗಳ ಅಭಿವೃದ್ಧಿಗೆ ಮನವಿ ಹಿನ್ನೆಲೆಯಲ್ಲಿ ವಕ್ಫ ಖಾತೆ ಸಚಿವರಾದ ಜಮೀರ್ ಆಹಮ್ಮದ್ ಅಗತ್ಯ ಅನುದಾನ ಕಲ್ಪಿಸಿದ್ದಾರೆ ಎಂದು ಹೇಳಿದರು.
ಇಂತಹ ಇಫ್ತಾರ್ ಕೂಟಗಳು ಸಮಾಜದ ಎಲ್ಲ ವರ್ಗದ ಜನರನ್ನು ಒಂದೇ ವೇದಿಕೆಗೆ ತರಲು ಸಹಕಾರಿಯಾಗುತ್ತವೆ. ಪರಸ್ಪರ ಪ್ರೀತಿ, ಸಹೋದರತ್ವ ಹಾಗೂ ಏಕತೆಯ ಸಂದೇಶವನ್ನು ಬಲಪಡಿಸುವಲ್ಲಿ ಈ ರೀತಿಯ ಕಾರ್ಯಕ್ರಮಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಿದರು.
ಜಲಾಲಿಯ ಮಸೀದಿ ಅಧ್ಯಕ್ಷ ಕೆ.ಎ.ಆದಂ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಸೀದಿಯ ಧರ್ಮಗುರುಗಳಾದ ಹಮೀದ್ ಮೌಲ್ವಿ, ಹಫಿಲ್ ಸಹದಿ, ವಕ್ಫ್ ಮಂಡಳಿ ಮಾಜಿ ಜಿಲ್ಲಾಧ್ಯಕ್ಷ ಎ.ಬಿ.ಉಮ್ಮರ್ ಮತ್ತು ಮುಸ್ಲಿಂ ಸಮುದಾಯದ ಮುಖಂಡರು ಇದ್ದರು. ನಂತರ ವಿವಿಧ ಸಮುದಾಯಗಳ ಪ್ರಮುಖರು ಒಟ್ಟಾಗಿ ಇಫ್ತಾರ್ ಸೇವಿಸಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net