ಕೆ.ಆರ್.ಪೇಟೆ: ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಸಿಗುತ್ತಿದ್ದು, ಶಿಕ್ಷಕರು ಜವಾಬ್ದಾರಿಯಿಂದ ಕೆಲಸ ಮಾಡುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಪ್ರಯತ್ನಿಸಬೇಕು. ಅದೇ ರೀತಿ ಪಾಲಕರು ಖಾಸಗಿ ಶಾಲೆಯ ವ್ಯಾಮೋಹ ಬಿಟ್ಟು, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವಂತೆ ಸಾಮಾಜಿಕ ಚಿಂತಕ ಗೋಪಾಲಕೃಷ್ಣ ಆವಧಾನಿ ಹೇಳಿದರು.
ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬೆಡದಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪಾಲಕರು ಮತ್ತು ಶಿಕ್ಷಕರ ಮಹಾಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಬೋಧನೆ, ಬಿಸಿಯೂಟ, ಸಮವಸ್ತ್ರ, ಪಠ್ಯಪುಸ್ತಕ ಸೇರಿದಂತೆ ಹಲವು ಸೌಲಭ್ಯಗಳನ್ನು ಉಚಿತವಾಗಿ ಸರ್ಕಾರ ನೀಡುತ್ತಿದೆ. ಇಷ್ಟೆಲ್ಲ ಸೌಲಭ್ಯಗಳನ್ನು ಒದಗಿಸಿದ್ದರೂ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿರುವುದಕ್ಕೆ ಪಾಲಕರ ಇಂಗ್ಲೀಷ್ ಮತ್ತು ಕಾನ್ವೆಂಟ್ ವ್ಯಾಮೋಹವೇ ಕಾರಣವಾಗಿದೆ. ಇದನ್ನು ಮನಗಂಡು ಸರ್ಕಾರವು ಎಲ್ಲ ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಜತೆಗೆ ಇಂಗ್ಲಿಷ್ ಕಲಿಸಲು ಅವಕಾಶ ಕಲ್ಪಿಸಿದೆ. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿಯೇ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಸಲಹೆ ನೀಡಿದರು.
ಬೆಡದಹಳ್ಳಿ ಪಂಚಭೂತೇಶ್ವರ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ, ಸರ್ಕಾರಿ ಶಾಲೆಯನ್ನು ಉಳಿಸಲು ಬೆಡದಹಳ್ಳಿ ಗ್ರಾಮಸ್ಥರು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಒಂದು ಶಾಲೆಯು ಮುಚ್ಚಿದರೆ ಇಡೀ ಗ್ರಾಮದ ಸೌಂದರ್ಯವೇ ಹಾಳಾಗುತ್ತದೆ. ಮಕ್ಕಳ ಕಲರವ ಇಲ್ಲದಿದ್ದರೆ ಗ್ರಾಮದಲ್ಲಿ ಸ್ಮಶಾನ ಮೌನದಂತಹ ವಾತಾವರಣ ಸೃಷ್ಟಿಯಾಗುತ್ತದೆ. ಮುಚ್ಚಿದ ಶಾಲೆಯನ್ನು ನೋಡಿದರೆ ಎಲ್ಲರಿಗೂ ದುಃಖ ಉಮ್ಮಳಿಸಿ ಬರುತ್ತದೆ. ಹಾಗಾಗಿ ಬೆಡದಹಳ್ಳಿ ಗ್ರಾಮಸ್ಥರು ಇದಕ್ಕೆ ಅವಕಾಶ ಮಾಡಿಕೊಡದೆ, ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದ ತಮ್ಮ ಮಕ್ಕಳನ್ನು ಕೆರೆತಂದು ತಮ್ಮೂರಿನ ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಮುಚ್ಚಿ ಹೋಗುವ ಹಂತಕ್ಕೆ ಬಂದಿದ್ದ ಶಾಲೆಯನ್ನು ಉಳಿಸಿಕೊಂಡಿರುವುದು ಎಲ್ಲರೂ ಮೆಚ್ಚುವಂತಹ ವಿಚಾರವಾಗಿದೆ ಎಂದರು.
ಮುಖ್ಯ ಶಿಕ್ಷಕರಾದ ಜಿ.ಎಸ್.ಮಂಜು, ಕಾಂತರಾಜು, ಶಿಕ್ಷಣ ಸಂಯೋಜಕ ಕೃಷ್ಣನಾಯಕ್, ಬಿ.ಆರ್.ಪಿ. ಶ್ರೀಧರ್, ಮಾರ್ಗೋನಹಳ್ಳಿ ಮೊರಾರ್ಜಿ ಶಾಲೆಯ ಶಿಕ್ಷಕ ಕೆ.ಎಸ್.ಚಂದ್ರು, ಕೊರಟೀಕೆರೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶ್, ಶಿಕ್ಷಕ ಕೆ.ಆರ್.ವಸಂತಕುಮಾರ್ ಇದ್ದರು.