ಕೆ.ಎಂ.ದೊಡ್ಡಿ: ಇಲ್ಲಿನ ವಿಶ್ವೇಶ್ವರಯ್ಯ ವೃತ್ತದ ಬಳಿ ಜಮಾಯಿಸಿದ ಪ್ರಗತಿಪರ ಸಂಘಟನೆ ಮತ್ತು ರೈತ ಸಂಘದ ಕಾರ್ಯಕರ್ತರು ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟಿಸಿ ನೀರು ಹರಿಸುವ ಕ್ರಮದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿಪರ ಸಂಘಟನೆ ಅಧ್ಯಕ್ಷ ಪ್ರೊ.ಬಿ.ಎಸ್.ಬೋರೇಗೌಡ ಮಾತನಾಡಿ, ಕಾವೇರಿ ಕೊಳ್ಳದ ರೈತರ ಬೆಳೆಗಳು ಒಣಗುತ್ತ ಸಂಕಷ್ಟದಲ್ಲಿದ್ದರೂ ಸಿಡಬ್ಲುೃಆರ್‌ಸಿ ತಮಿಳುನಾಡಿಗೆ ನೀರು ಹರಿಸಲು ಆದೇಶ ಮಾಡಿರುವ ಕ್ರಮ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂದ್ ಯಶಸ್ವಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಆದೇಶ ಮಾಡಿರುವ ಕ್ರಮದ ವಿರುದ್ಧ ಕರೆ ನೀಡಿದ್ದ ಬಂದ್ ಕೆ.ಎಂ.ದೊಡ್ಡಿಯಲ್ಲಿ ಭಾಗಶಃ ಯಶಸ್ವಿಯಾಯಿತು.
ವರ್ತಕರು ಸ್ವಯಂಪ್ರೇರಿತರಾಗಿ ಬಂದ್ ನಡೆಸಿ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ವರ್ತಕರ ಸಂಘ ಬಂದ್‌ಗೆ ಸಂರ್ಪೂಣ ಸಹಕಾರ ನೀಡಿತ್ತು. ಬೆಳಗ್ಗೆಯಿಂದ ಸಂಜೆ 6 ಗಂಟೆವರೆಗೆ ಬಂದ್ ನಡೆಸಿದರು. ಮೆಡಿಕಲ್ ಶಾಪ್ ನಂದಿನಿ ಪಾರ್ಲರ್ , ಆಸ್ಪತ್ರೆ ಮತ್ತು ಶಾಲಾ ಕಾಲೇಜು ಹೊರತುಪಡಿಸಿ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಸಹಕರಿಸಿದರು.