ಚಿಂದಿ ಹಾಯುವ, ಪಾತ್ರೆ ರಿಪೇರಿ ನೆಪದಲ್ಲಿ ಕಳ್ಳತನ
ಮಳವಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಚಿಂದಿ ಹಾಯುವ ಹಾಗೂ ಪಾತ್ರೆ ರಿಪೇರಿ ಮಾಡುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ಆರು ಜನ ಕಳ್ಳರ ತಂಡಕ್ಕೆ ಖಾಕಿ ಎಡೆಮುರಿ ಕಟ್ಟಿದೆ. ಜ.16ರಂದು ಮಳವಳ್ಳಿ ತಾಲೂಕು ಸಾಗ್ಯ ಸರಗೂರು ಗ್ರಾಮದ ಪಟ್ಟಲದಮ್ಮ ದೇವಸ್ಥಾನದ ಬಾಗಿಲು ಮುರಿದು ಚಿನ್ನಾಭರಣ, ಬೆಳ್ಳಿ ಸರ, ರೇಷ್ಮೆ ಸೀರೆ, ಹುಂಡಿ ಹಣ ದೋಚಲಾಗಿತ್ತು. ಈ ಸಂಬಂಧ ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಅದರಂತೆ ತಮಿಳುನಾಡು ಮೂಲದ ವಿಜಯ್(46) ಮತ್ತು ಮಣಿ(35), ಕನಕಪುರ ತಾಲೂಕು ಸಾತನೂರು ಕಾಲನಿಯ ಮಧುರ(22), ಮಾಯಪ್ಪನಹಳ್ಳಿಯ ಭರತ್(21), ರಾಮನಗರ ಟೌನ್‌ನ ನವೀನ್(21), ಮೈಸೂರು ನಗರದ ಶಬ್ಬಿರ್(28) ಎಂಬುವರನ್ನು ಜ.17ರಂದು ಕನಕಪುರ ತಾಲೂಕು ಸಾತನೂರು ಟೌನ್‌ನ ದೇವಸ್ಥಾನದ ಬಳಿ ಬಂಧಿಸಲಾಗಿದೆ ಎಂದು ಡಾ.ವಿ.ಜೆ.ಶೋಭಾರಾಣಿ ಹೇಳಿದರು.
ಆರೋಪಿಗಳೆಲ್ಲರೂ ಬೇರೆ ಬೇರೆ ಕಡೆಯವರಾಗಿದ್ದರೂ ಚಿಂದಿ ಹಾಯುವ ಕೆಲಸ ಮಾಡುತ್ತಿದ್ದಾಗ ಜತೆಯಾಗಿದ್ದಾರೆ. ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು. ಇವರು ಬೆಳಕವಾಡಿ, ಕೆ.ಎಂ.ದೊಡ್ಡಿ, ಮಳವಳ್ಳಿ ಟೌನ್, ಸಾತನೂರು, ಕನಕಪುರ ಹಾಗೂ ತಮಿಳುನಾಡು, ಅಂಚೆಹಟ್ಟಿ, ಧರ್ಮಪುರಿ, ಕೃಷ್ಣಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಬಂಧಿತರಿಂದ 7,17,844 ರೂ ಮೌಲ್ಯದ 24 ಗ್ರಾಂ ತೂಕದ ಚಿನ್ನಾಭರಣ, 245 ಗ್ರಾಂ ತೂಕದ ಬೆಳ್ಳಿಯ ಒಡವೆ, ಎರಡು ಜತೆ ದೀಪಾಲೆ ಕಂಬ, ಎರಡು ಪೂಜಾ ತಟ್ಟೆ, ಐದು ಘಂಟೆ, ಹುಂಡಿಯಲ್ಲಿ ದೋಚಿದ್ದ 5,094 ರೂಗಳು, ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಒಂದು ಬೈಕ್, ಗೂಡ್ಸ್ ಆಟೋ, ಎರಡು ಕಬ್ಬಿಣ್ಣದ ರಾಡ್ ಜತೆಗೆ ಕಳ್ಳತನ ಮಾಡಿದ್ದ ಎರಡು ಮೇಕೆಯನ್ನು ಮಾರಾಟ ಮಾಡಿದ್ದ 12 ಸಾವಿರ ರೂ ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದ ಎಸ್ಪಿ, ತನಿಖಾ ತಂಡದಲ್ಲಿದ್ದ ಮಳವಳ್ಳಿ ಡಿವೈಎಸ್ಪಿ ಎಸ್.ಬಿ.ಯಶವಂತ್‌ಕುಮಾರ್, ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್, ಎಸ್‌ಐ ಲೋಕೇಶ್, ಸಿಬ್ಬಂದಿ ರಿಯಾಜ್‌ಪಾಷಾ, ಪ್ರಭುಸ್ವಾಮಿ, ರವಿಕಿರಣ್, ಲೋಕೇಶ್, ಸಿದ್ದರಾಜು, ಮೋಹನ್‌ಕುಮಾರ್, ರಫಿಕ್ ನಧಾಪ್ ಅವರನ್ನು ಅಭಿನಂದಿಸಿದರು.