ಮದ್ದೂರು:ಶನಿವಾರ ರಾತ್ರಿ ಬಂದ ಬಿರುಗಾಳಿ ಮಳೆಗೆ ನಗರ ಸೇರಿದಂತೆ ತಾಲೂಕಿನಾದ್ಯಂತ ಹಲವರು ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತಗೊಳ್ಳುವ ಜತೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡು ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು.
ಸೆಸ್ಕ್ ಸಿಬ್ಬಂದಿ ನಿಗದಿತ ಸಮಯಕ್ಕೆ ಸ್ಥಳಕ್ಕೆ ಭೇಟಿ ನೀಡಿ ಮರಗಳನ್ನು ತೆರವುಗೊಳಿಸಿ ವಿದ್ಯುತ್ ಸಂಪರ್ಕ ಬರುವಂತೆ ವ್ಯವಸ್ಥೆ ಮಾಡಿದರು. ಕೆಲವು ಕಡೆಗಳಿಗೆ ತಡವಾಗಿ ಸೆಸ್ಕ್ ಸಿಬ್ಬಂದಿ ಹೋದ ಪರಿಣಾಮ ಸಾರ್ವಜನಿಕರ ಸೆಸ್ಕ್ ಸಿಬ್ಬಂದಿ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಮನೆಗೆ ನುಗ್ಗಿದ ನೀರು: ನಗರದ ಲೀಲಾವತಿ ಬಡಾವಣೆಯ 11ನೇ ಕ್ರಾಸ್‌ನಲ್ಲಿ ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿ ಕೆಲಕಾಲ ಅವಾಂತರ ಸೃಷ್ಟಿಸಿತ್ತು. ಇದೆ ಬಡಾವಣೆಯ ಮುಜಾಮಿಲ್ ಎಂಬುವರ ಮನೆಗೆ ಮಳೆ ನೀರು ನುಗ್ಗಿದ ಪರಿನಾಮ ಗೃಹೋಪಯೋಗಿ ವಸ್ತುಗಳು ನೀರಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಹಾಗೂ ಮಳೆಯ ನೀರಿನ ಜತೆಗೆ ಹಾವು ಬಂದ ಪರಿಣಾಮ ಸಾರ್ವಜನಿಕರು ಕೆಲಕಾಲ ಆತಂಕ್ಕೊಳಗಾಗಿದ್ದರು.
ಮನೆಗಳು ಜಖಂ: ತಾಲೂಕಿನ ಸಾದೊಳಲು ಗ್ರಾಮದ ಹೇಮಾವತಿ ಹಾಗೂ ದೊಡ್ಡೋಳಮ್ಮ ಅವರ ಮನೆಯ ಶೀಟುಗಳು ಗಾಳಿಗೆ ಹಾರಿ ಹೋಗಿದೆ. ಮೇಲದಾಸನದೊಡ್ಡಿಯ ಚಿಕ್ಕಕೆಂಪಮ್ಮ ಎಂಬುವರ ಮನೆ ಗೋಡೆ ಕುಸಿದು ಅಪಾರ ನಷ್ಟ ಉಂಟಾಗಿದ್ದು, ಸರ್ಕಾರ ಸೂಕ್ತ ಪರಿಹಾರ ಕೊಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.