ಕನ್ನಡಪರ ಸಂಘಟನೆಗಳಿಂದ ಈಡುಗಾಯಿ ಚಳವಳಿ: ಅಡುಗೆ ಅನಿಲ ಸಮಸ್ಯೆ ಬಗೆಹರಿಸಲು ಆಗ್ರಹ

ಮಂಡ್ಯ ನಗರದ ಜೆ.ಸಿ ವೃತ್ತದಲ್ಲಿ ಕನ್ನಡಪರ ಸಂಘಟನೆಗಳಿಂದ ಈಡುಗಾಯಿ ಚಳವಳಿ ನಡೆಸಲಾಯಿತು.
ಮಂಡ್ಯ ನಗರದ ಜೆ.ಸಿ ವೃತ್ತದಲ್ಲಿ ಕನ್ನಡಪರ ಸಂಘಟನೆಗಳಿಂದ ಈಡುಗಾಯಿ ಚಳವಳಿ ನಡೆಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ಘೋಷಣೆಗೆ ಒತ್ತಾಯ
  • ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪ್ರತಿಭಟನೆ
ಮಂಡ್ಯ: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧ ನಿಲ್ಲಿಸಬೇಕು. ಅಡುಗೆ ಅನಿಲ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳಿಂದ ನಗರದಲ್ಲಿ ಈಡುಗಾಯಿ ಚಳವಳಿ ನಡೆಸಲಾಯಿತು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರದ ನಾಯಕರು ಯುದ್ಧದಲ್ಲಿ ತೊಡಗಿರುವ ನಾಯಕರೊಂದಿಗೆ ಚರ್ಚೆ ನಡೆಸಬೇಕು. ವಿಶ್ವದಲ್ಲಿ ಶಾಂತಿ ನೆಲೆಸುವಂತಹ ವಾತಾವರಣ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಬಹಳ ಗಂಭೀರವಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಅಮೆರಿಕ, ಇಸ್ರೇಲ್, ಇರಾನ್ ಈ ಮೂರು ದೇಶಗಳ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ ಇಡೀ ವಿಶ್ವಕ್ಕೇ ಬಿಸಿ ತಟ್ಟಿದೆ. ಪ್ರಪಂಚದ ಎಲ್ಲ ಮೂಲೆ ಮೂಲೆಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಜನತೆ ಇದ್ದಾರೆ. ಇದೊಂದು ನೋವಿನ ಸಂಗತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಯುದ್ಧದ ಭೀತಿಯಿಂದಾಗಿ ಕರ್ನಾಟಕದಲ್ಲೂ ಒಂದು ರೀತಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಹೋಗುತ್ತಿದೆ. ಪೆಟ್ರೋಲ್, ಡೀಸೆಲ್ ಸಿಕ್ಕಾಪಟ್ಟೆ ಏರಿಕೆಯಾಗುತ್ತಿದೆ. ಇದು ಬಹಳ ಗಂಭೀರವಾದ ಪರಿಸ್ಥಿತಿ. ಅಡುಗೆ ಅನಿಲ ಸಿಗುತ್ತಿಲ್ಲ. ಯುದ್ಧ ನೇರವಾಗಿ ಶುರವಾದರೆ ಇನ್ನು ಬಹಳ ನೋವು ಅನುಭವಿಸಬೇಕಾಗುತ್ತದೆ. ಕರ್ನಾಟಕದ ಸಂಸದರು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಕರ್ನಾಟಕಕ್ಕೆ ಬರುವ ಗ್ಯಾಸ್ ಸಿಲಿಂಡರ್ ಕೂಡಲೇ ಒದಗಿಸಬೇಕು ಎಂದು ಒತ್ತಾಯಿಸಿದರು. ಯುದ್ಧದಿಂದಾಗುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಈಗಾಗಲೇ ನಾವು ನಮ್ಮ ಪಕ್ಷದಿಂದ ರಾಜ್ಯಾದ್ಯಂತ ಈಡುಗಾಯಿ ಒಡೆಯುವ ಚಳವಳಿ ಆರಂಭಿಸಿದ್ದೇವೆ ಎಂದು ಎಚ್ಚರಿಸಿದರು.
ರಾಷ್ಟ್ರಪತಿ ಅವರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಬರುತ್ತಿದ್ದಾರೆ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಸಮಾಧಿಗೆ ಪೂಜೆ ಸಲ್ಲಿಸುವವರಿದ್ದಾರೆ. ಇದಕ್ಕೂ ಮುನ್ನ ಸ್ವಾಮೀಜಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಬೇಕು. ಮಠಕ್ಕೆ ಪ್ರಧಾನಿ, ಗೃಹ ಸಚಿವರು, ಕೇಂದ್ರದ ಸಚಿವರು, ರಾಜ್ಯದ ಮುಖ್ಯಮಂತ್ರಿ, ಸಚಿವರು ಭೇಟಿ ನೀಡಿದ್ದಾರೆ. ಆದರೂ ಶ್ರೆಗಳಿಗೆ ಭಾರತರತ್ನ ಕೊಡಿಸುವ ಪ್ರಯತ್ನ ಮಾಡಲಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು. ಆದರೂ ಶ್ರೀಗಳಿಗೆ ಭಾರತರತ್ನ ಸಿಗಲಿಲ್ಲ. ಇನ್ನಾದರೂ ಭಾರತ ರತ್ನ ಪ್ರಶಸ್ತಿ ಕೊಡಿಸಬೇಕು ಎಂದು ಆಗ್ರಹಿಸಿದರು.
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ರಾಮನಗರ ಜಿಲ್ಲಾಧ್ಯಕ್ಷ ಜಗದೀಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net