ಮದ್ದೂರು : ನಗರಸಭಾ ವ್ಯಾಪ್ತಿಯ ಚಾಮನಹಳ್ಳಿ ಹಾಗೂ ಸೋಮನಹಳ್ಳಿಗಳ ಉಪ ಕಚೇರಿಗಳಲ್ಲಿ ಇ ಖಾತಾ ಸೇವೆಯನ್ನು ಗುರುವಾರದಿಂದ ಪ್ರಾರಂಭಿಸಿರುವುದಾಗಿ ನಗರಸಭೆಯ ಪೌರಾಯುಕ್ತೆ ರಾಧಿಕಾ ತಿಳಿಸಿದರು.
ಈ ಹಿಂದೆ ಗ್ರಾಪಂಗಳಾಗಿದ್ದ ಸೋಮನಹಳ್ಳಿ ಹಾಗೂ ಚಾಮನಹಳ್ಳಿಗಳನ್ನು ನಗರಸಭಾ ವ್ಯಾಪ್ತಿಗೆ ಸೇರ್ಪಡೆ ಮಾಡಿರುವ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಸೇವೆಯನ್ನು ಆರಂಭಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇ ಖಾತಾಗಾಗಿ ಅರ್ಜಿ ಸಲ್ಲಿಸಲು 50 ರೂ. ಶುಲ್ಕ ನಿಗಧಿಪಡಿಸಲಾಗಿದ್ದು, ಅರ್ಜಿ ಸಲ್ಲಿಸಿದ ಮೂರು ದಿನಗಳಲ್ಲಿ ಇ-ಖಾತಾ ಪಡೆಯಬಹುದಾಗಿದೆ. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಮನೆ ಕಟ್ಟಲು ಪರವಾನಗಿ ಸೇರಿದಂತೆ ಹಲವು ಸೇವೆಗಳನ್ನು ಆರಂಭಿಸಲಾಗುವುದು ಎಂದರು.
ನಗರಸಭಾ ವ್ಯಾಪ್ತಿಗೆ ಸೇರ್ಪಡೆಯಾಗಿರುವ ಗೆಜ್ಜಲಗೆರೆ ಹಾಗೂ ಗೊರವನಹಳ್ಳಿಗಳಲ್ಲಿಯೂ ಇ-ಖಾತಾ ಸೇವೆಯನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸಲಾಗುವುದು ಎಂದರು.
ಕಂದಾಯ ಅಧಿಕಾರಿ ಪುಟ್ಟಸ್ವಾಮಿ, ಕಂದಾಯ ನಿರೀಕ್ಷಕ ಲೋಕೇಶ್ ಇದ್ದರು.