ಪ್ರತಿ ಗಂಟೆಗೆ ಇಬ್ಬರು ರೈತರ ಆತ್ಮಹತ್ಯೆ: ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಆತಂಕ

ಮಂಡ್ಯದ ಕೆವಿಎಸ್ ಭವನದಲ್ಲಿ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್‌ಗಳನ್ನು ಬಿಡುಗಡೆ ಮಾಡಲಾಯಿತು.
ಮಂಡ್ಯದ ಕೆವಿಎಸ್ ಭವನದಲ್ಲಿ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್‌ಗಳನ್ನು ಬಿಡುಗಡೆ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಗುರುವಂದನೆ, ಬಿತ್ತನೆ ಬೀಜ ವಿತರಣೆ
  • ನಾಟಿ (ಹಳ್ಳಿಕಾರ್) ಹಸು ಆಧಾರಿತ ಸುಭಾಷ್ ಪಾಳೇಕರ್ ಕೃಷಿ ಜನಾಂದೋಲನ ವತಿಯಿಂದ ಆಯೋಜನೆ
ಮಂಡ್ಯ: ನಷ್ಟ ಹಾಗೂ ಸಾಲಬಾಧೆಯಿಂದಾಗಿ ದೇಶದಲ್ಲಿ ಪ್ರತಿ ಗಂಟೆಗೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ ರಾಷ್ಟ್ರದಾದ್ಯಂತ ವಾರ್ಷಿಕವಾಗಿ 10 ಸಾವಿರಕ್ಕೂ ಹೆಚ್ಚು ರೈತರು ಮತ್ತು ಕೃಷಿ ಕಾರ್ಮಿಕರು ಸಾಲದ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಆತಂಕ ವ್ಯಕ್ತಪಡಿಸಿದರು.
ನಾಟಿ (ಹಳ್ಳಿಕಾರ್) ಹಸು ಆಧಾರಿತ ಸುಭಾಷ್ ಪಾಳೇಕರ್ ಕೃಷಿ ಜನಾಂದೋಲನ ವತಿಯಿಂದ ನಗರದ ಕೆವಿಎಸ್ ಭವನದಲ್ಲಿ ಡಾ.ಸುಭಾಷ್ ಪಾಳೇಕರ್ ಅವರ 77ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಗುರುವಂದನೆ, ಕರಿಮೆಣಸಿನ ಸಸಿ ಮತ್ತು ಗೌರಿಸಣ್ಣ ಭತ್ತದ ಬಿತ್ತನೆ ಬೀಜ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರು ತಮ್ಮ ಜಮೀನುಗಳಲ್ಲಿ ಬೆಳೆ ಬೆಳೆದು ತಾವೂ ತಿಂದು ಉಳಿದಿದ್ದನ್ನು ಮಾರಾಟ ಮಾಡಿ ಖುಷಿಯಿಂದಲೇ ಇದ್ದರು. ಆದರೆ 1995ರಿಂದ ರೈತರ ಆತ್ಮಹತ್ಯೆ ಪ್ರಕರಣ ಪ್ರಾರಂಭವಾಯತು. ಅಂದು ಭಾರತ ವಿಶ್ವ ವಾಣಿಜ್ಯ ಸಂಸ್ಥೆಯ ಸದಸ್ಯತ್ವ ಪಡೆಯಿತು. ಇದರಿಂದಾಗಿ ನಮ್ಮ ದೇಶದ ಕೃಷಿ ಮಾರುಕಟ್ಟೆಗಳಲ್ಲಿ ವಿದೇಶಿ ಉತ್ಪನ್ನಗಳು ಬಿಕರಿಯಾಗಲು ಪ್ರಾರಂಭವಾಯಿತು. ಇದು ನಮ್ಮ ರೈತರ ಪರಿಸ್ಥಿತಿ ಹಾಳಾಗಲು ಆರಂಭವಾಯಿತು ಎಂದು ವಿವರಿಸಿದರು.
ಜಾಗತಿಕ ಮಾರುಕಟ್ಟೆಯ ಪದಾರ್ಪಣೆಯಿಂದಾಗಿ ಅಮೆರಿಕಾ, ಆಸ್ಟ್ರೇಲಿಯಾ, ಥೈಲ್ಯಾಂಡ್, ಫಿಲಿಫೈನ್ಸ್‌ನ ಉತ್ಪನ್ನಗಳು ಇಲ್ಲಿ ಮಾರಾಟವಾಗಲು ಶುರುವಾದವು. ಆಮದು ಶುಲ್ಕ ಕಡಿಮೆಯಾಯಿತು. ನಮ್ಮ ರೈತರ ಉತ್ಪನ್ನಗಳು ನಿಧಾನವಾಗಿ ಬೇಡಿಕೆ ಕಳೆದುಕೊಂಡವು. ಸ್ಥಳೀಯ ಮಾರುಕಟ್ಟೆ ರೈತರ ಕೈತಪ್ಪಿ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದರು.
ರೈತರು ತಾವು ಬೆಳೆದ ಬೆಳೆಗೆ ಬೆಲೆ ಕಟ್ಟುತ್ತಿರಲಿಲ್ಲ. ಬದಲಾಗಿ ದಲ್ಲಾಳರು ರೈತರ ಉತ್ಪನ್ನಗಳನ್ನು ಹರಾಜು ಹಾಕಿ ಬೆಲೆ ಕಟ್ಟುತ್ತಿದ್ದರು. ಕಷ್ಟಪಟ್ಟು ಬೆವರು ಸುರಿಸಿ ದುಡಿದ ಉತ್ಪನ್ನಗಳಿಗೆ ಕಡಿಮೆ ಕಾಸಿಗೆ ಮಾರಾಟ ಮಾಡಿ ಮನೆಗೆ ಕಡೆ ನಡೆದರೆ, ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ದಲ್ಲಾಳಿಗಳು ಹಣ ಮಾಡಿಕೊಳ್ಳುತ್ತಿದ್ದರು. ಇಂತಹ ಸ್ಥಿತಿಯಿಂದಾಗಿ ರೈತರ ಬದುಕು ಮೂರಾಬಟ್ಟೆಯಾಗಿತ್ತು. ಜತೆಗೆ ಹವಾಮಾನದ ವೈಪರೀತ್ಯ. ಒಂದು ವರ್ಷ ವಿಪರೀತ ಮಳೆಯಿಂದ ಬೆಳೆ ಕೊಚ್ಚಿಕೊಂಡು ಹೋದರೆ, ಮತ್ತೊಂದು ವರ್ಷ ಮಳೆಯಿಲ್ಲದೆ ಬೆಳೆ ಒಣಗುವಂತಹ ಸ್ಥಿತಿಯಲ್ಲಿ ರೈತರ ಬದುಕು. ಇಷ್ಟಾದರೂ, ನಮ್ಮನ್ನಾಳುವ ಜನಪ್ರತಿನಿಧಿಗಳು ಲೋಕಸಭೆ, ವಿಧಾನ ಸಭೆಗಳಲ್ಲಿ ರೈತರ ಆತ್ಮಹತ್ಯೆ, ಬೆಳೆ ಬಗ್ಗೆ ಮಾತುಟಿ ಬಿಚ್ಚುತ್ತಿರಲಿಲ್ಲ. ಈ ಎಲ್ಲ ಕಾರಣಗಳಿಂದಾಗಿ ರೈತ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡು ಕುಟುಂಬವನ್ನೂ ಬೀದಿ ಪಾಲು ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೃಷಿ ತುರ್ತು ಪರಿಸ್ಥಿತಿಗೆ ದೀರ್ಘ ಕಾಲದ ಉತ್ತರವೆಂಬಂತೆ ಪಾಳೇಕರ್ ಸಾವಯವ ಕೃಷಿ ಪದ್ಧತಿಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ. ಆ ಮೂಲಕ ಸ್ವಾಭಿಮಾನಿ ಕೃಷಿಕನಾಗಿ ರೈತನಾಗಿ, ತಾನೂ ಬದುಕಿ, ತನ್ನ ಮಕ್ಕಳನ್ನೂ ಬದುಕಿಸುತ್ತೇನೆ ಎನ್ನುವವರಿಗೆ ಎಪ್‌ಪಿಕೆ ಒಂದೇ ದಾರಿ ಎಂದು ಪ್ರತಿಪಾದಿಸಿದರು.
ಪಾಳೇಕರ್ ಸಾವಯವ ಕೃಷಿಕ ಕೆ.ಜೆ.ಅನಂತರಾವ್ ಅವರು ಕಬ್ಬು ಬೆಳೆಯುವುದು, ಜತೆಗೆ ಮಧ್ಯದಲ್ಲಿ ತರಕಾರಿ ಬೆಳೆಯುವುದರ ಕುರಿತು ಮಾತನಾಡಿದರೆ, ಮಂಜು ಕಿರಣ್ ಮತ್ತು ಉಮ್ಮಡಹಳ್ಳಿ ಶೇಖರ್ ಅವರು ರಾಸಾಯನಿಕ ಕೃಷಿಯಿಂದಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಮಾತನಾಡಿದರು.
ಜಂಟಿ ಕೃಷಿ ನಿರ್ದೇಶಕ ಜಿ.ಎಸ್.ಜಯಸ್ವಾಮಿ ಸಮಾರಂಭ ಉದ್ಘಾಟಿಸಿದರು. ರೈತ ಹೋರಾಟಗಾರರಾದ ನಂದಿನಿ ಜಯರಾಂ, ಹೊನ್ನೂರು ಪ್ರಕಾಶ್, ಎನ್.ಶಿವಣ್ಣ, ಪಾಳೇಕರ್ ಸಾವಯವ ಕೃಷಿಕರಾದ ಕೆ.ಜೆ.ಅನಂತರಾವ್, ಹಲ್ಲೇಗೆರೆ ಶಿವರಾಂ, ಪರಿಸರ ಮಿತ್ರ ಜಯಶಂಕರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net