ಸಮಾನತೆಯ ತತ್ವ ಎತ್ತಿಹಿಡಿದ ಸಂತ: ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್ ಶ್ಲಾಘನೆ

ಮಂಡ್ಯ ನಗರದಲ್ಲಿ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರ 119ನೇ ಜನ್ಮವನ್ನು ಆಚರಿಸಲಾಯಿತು.
ಮಂಡ್ಯ ನಗರದಲ್ಲಿ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರ 119ನೇ ಜನ್ಮವನ್ನು ಆಚರಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಶಿವಕುಮಾರ ಮಹಾಸ್ವಾಮೀಜಿ 119ನೇ ಜನ್ಮದಿನಾಚರಣೆ
  • ಕಾಯಕಯೋಗಿ ಫೌಂಡೇಷನ್, ಸಿದ್ದಗಂಗಾಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘ ಹಾಗೂ ಸಿದ್ದಗಂಗಾಶ್ರೀ ಸೇವಾಸಮಿತಿ ವತಿಯಿಂದ ಆಯೋಜನೆ
ಮಂಡ್ಯ: ವಿಶ್ವಗುರು ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಸಮಾನತೆಯ ತತ್ವ ಎತ್ತಿಹಿಡಿದು ಎಲ್ಲ ಮಠಾಧೀಶರಿಗೂ ಮಾದರಿಯಾದ ಪರಮಪೂಜ್ಯ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರು ನಮ್ಮ ದೇಶದ ಮಹಾನ್ ಸಂತ ಎಂದು ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್ ಹೇಳಿದರು.
ನಗರದ ಸಿದ್ದಗಂಗಾಶ್ರೀಗಳ ಉದ್ಯಾನದಲ್ಲಿ ಕಾಯಕಯೋಗಿ ಫೌಂಡೇಷನ್, ಸಿದ್ದಗಂಗಾಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘ ಹಾಗೂ ಸಿದ್ದಗಂಗಾಶ್ರೀ ಸೇವಾಸಮಿತಿ ವತಿಯಿಂದ ಆಯೋಜಿಸಿದ್ದ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರ 119ನೇ ಜನ್ಮದಿನಾಚರಣೆ ಹಾಗೂ ದಾಸೋಹ ಹುಣ್ಣಿಮೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಜಾತಿ, ಧರ್ಮವನ್ನು ನೋಡದೆ ಎಲ್ಲ ಸಮುದಾಯದ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳ ಅಭಿವೃದ್ಧಿಗೆ ಅನ್ನ, ಅರಿವು, ಆಸರೆಯಾಗಿ ನಿಂತ ಸ್ವಾಮೀಜಿ ಅವರು ಜಾತ್ಯಾತೀತ ತತ್ವವನ್ನು ಸಮಾಜಕ್ಕೆ ಬಿತ್ತಿದ್ದಾರೆ. ಅವರ ನಿಸ್ವಾರ್ಥ ಪ್ರೀತಿ, ಕರುಣೆ, ಸೇವೆಯನ್ನು ಸ್ಮರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ದೇವರು ನಡೆದಾಡಿದ ನಿದರ್ಶನವನ್ನು ಪ್ರಪಂಚದಲ್ಲಿ ಎಲ್ಲಿ ಹುಡುಕಿದರೂ ಸಿಗುವುದಿಲ್ಲ. ಆದರೆ ಕರ್ನಾಟಕದ ಸಿದ್ದಗಂಗಾಮಠದಲ್ಲಿ ಮಾತ್ರ ನಾವು ಕಾಣಬಹುದು. ಸ್ವಾಮೀಜಿ ಅವರು ಕೇವಲ ಅಕ್ಷರ ಜ್ಞಾನವಲ್ಲದೆ ಹಸಿದವರಿಗೆ ಅನ್ನ ನೀಡಿದ ದೇವಮಾನವರಾಗಿದ್ದಾರೆ. ಒಬ್ಬ ಮನುಷ್ಯನನ್ನು ಬದುಕಿದ್ದಾಗಲೆ ನಡೆದಾಡುವ ದೇವರು ಕೋಟ್ಯಂತರ ಜನ ಪೂಜಿಸುತ್ತಾರೆ ಎಂದರೆ ಅವರ ಸೇವಾಕಾರ್ಯ ಎಷ್ಟೊಂದು ಅಮರವಾಗಿ ಉಳಿದಿದೆ ಎಂಬುದನ್ನು ಅರಿಯಬೇಕೆಂದರು.
ಒಬ್ಬ ಮಠಾಧೀಶರು, ಮಠಗಳು ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟ ಅಭಿನವ ಬಸವಣ್ಣನವರು ಸಿದ್ದಗಂಗಾ ಶ್ರೀಗಳು. ರಾಜಕೀಯ, ಸ್ವಜಾತಿಯನ್ನು ದೂರವಿಟ್ಟು ಎಲ್ಲರನ್ನೂ ಸಮಭಾವದಿಂದ ಕಂಡ ಸ್ವಾಮೀಜಿಯವರಿಗೆ ಭಾರತರತ್ನ ಪ್ರಶಸ್ತಿ ಕೊಡಿಸಲು ಕರ್ನಾಟಕದ ಎಲ್ಲ ಪಕ್ಷದ ಸಂಸದರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ತರಬೇಕು. ಈ ಮೂಲಕ ಕರುನಾಡಿನ ಮಠಾಧೀಶರ ಗೌರವವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದರು.
ನಗರಸಭೆ ಮಾಜಿ ಸದಸ್ಯ ಅಮ್ಜದ್ ಪಾಷಾ ಮಾತನಾಡಿ, ಎಲ್ಲ ವರ್ಗದವರನ್ನು ಸಮಾನತೆಯಿಂದ ಕಂಡು ಲಕ್ಷಾಂತರ ಜನರಿಗೆ ಉಚಿತವಾಗಿ ವಿದ್ಯೆ, ಅನ್ನ, ಆಶ್ರಯ ನೀಡಿದ ಸ್ವಾಮೀಜಿ ಅವರ ಸೇವೆ ಅನುಕರಣೀಯ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡಾಗ ಮಾತ್ರ ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾವು ಕಾಣಲು ಸಾಧ್ಯವಾಗುತ್ತದೆ. ಶರಣರ ಚಿಂತನೆಗಳನ್ನು ಚಾಚೂತಪ್ಪದೆ ತಮ್ಮ 111 ವರ್ಷಗಳ ಕಾಲ ಅನುಷ್ಠಾನಗೊಳಿಸಿದ ಮಹಾನ್ ಚೇತನ ಎಂದರು.
ಕಾಯಕ್ರಮ ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ನುಡಿಭಾರತಿ ಎಲ್.ಬಸವೇಗೌಡ, ಪರಮಪೂಜ್ಯ ಸಿದ್ದಗಂಗಾ ಶ್ರೀಗಳ ಶುಭನಾಮದಲ್ಲಿ ಉದ್ಯಾನವನ್ನು ನಿರ್ಮಾಣ ಮಾಡಿರುವುದು ನಮ್ಮ ಮಂಡ್ಯಕ್ಕೆ ಕಳಸಪ್ರಾಯವಾಗಿದೆ. ಪ್ರತಿನಿತ್ಯ ನೂರಾರು ಜನ ವಾಯು ವಿಹಾರಿಗಳು, ವಿದ್ಯಾರ್ಥಿಗಳು, ವಯೋವೃದ್ಧರು ಇಲ್ಲಿನ ಸುಂದರ ವಾತಾವರಣದಲ್ಲಿ ಕುಳಿತು ಸ್ವಾಮೀಜಿ ಅವರ ಸ್ಮರಣೆ ಮಾಡುತ್ತಿದ್ದಾರೆ ಎಂದು ಮೆಚ್ಚಗೆ ವ್ಯಕ್ತಪಡಿಸಿದರು.
ಮುಖಂಡರಾದ ಎಂ.ಆರ್.ಮಂಜುನಾಥ್, ದೊಡ್ಡಯ್ಯ, ಎಂ.ಎಸ್.ಮಂಜುನಾಥ್, ಮಲ್ಲಿಕಾರ್ಜುನಪ್ಪ, ಮೆಣಸಗೆರೆ ಶಿವಲಿಂಗಯ್ಯ, ಕೈಲಾಸಮೂರ್ತಿ, ಶಂಕರಮೂರ್ತಿ, ಎಚ್.ಆರ್.ಕನ್ನಿಕಾ, ಬಿ.ಎಸ್.ಅನುಪಮಾ, ಅಂತನಹಳ್ಳಿ ತೇಜಸ್, ಅಮೃತಿ ಶಂಕರ್, ಜಿ.ಮಹಾಂತಪ್ಪ, ಶಿವರುದ್ರಪ್ಪ ಇತರರಿದ್ದರು.
ಇದೇ ಸಂದರ್ಭದಲ್ಲಿ ಸಮಾಜಸೇವಕ ಡಾ.ಮಲ್ಲಿಕಾರ್ಜುನಯ್ಯ ದಂಪತಿಗೆ ‘ದಾಸೋಹಸಿರಿ’ ಪ್ರಶಸ್ತಿ ಹಾಗೂ ನಾಡಿನಾದ್ಯಂತ ಬಸವತತ್ವಗಳನ್ನು ಪಸರಿಸುತ್ತಾ ಸುಶ್ರಾವ್ಯವಾಗಿ ವಚನಗಳನು ಹಾಡಿ ಜನಮನ ಸೂರೆಗೂಂಡಿರುವ ಸುಪ್ರಸಿದ್ದ ಗಾಯಕ ಬಿಡದಿ ರೇಣುಕಪ್ಪ ಅವರಿಗೆ ‘ಕಾಯಕಯೋಗಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಾಸೋಹ ಹುಣ್ಣಿಮೆ ಅಂಗವಾಗಿ ಅನ್ನಸಂತರ್ಪಣೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net