ಮಂಡ್ಯ: ಅಮೋಘ ಅಭಿನಯ ಮತ್ತು ಸಹಜ ನಡವಳಿಕೆ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ ಡಾ.ರಾಜಕುಮಾರ್ ಜನಸಮೂಹದ ಸಾಂಸ್ಕೃತಿಕ ರಾಯಭಾರಿ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಬಣ್ಣಿಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ)ಯಿಂದ ಆಯೋಜಿಸಿದ್ದ ಡಾ.ರಾಜಕುಮಾರ್ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ವ್ಯಕ್ತಿತ್ವ ಮತ್ತು ಪಾತ್ರಗಳ ಮೂಲಕ ಚಿತ್ರರಂಗದ ಒಳಗೆ ಮತ್ತು ಸಾರ್ವಜನಿಕವಾಗಿ ನಾಯಕತ್ವವನ್ನು ರೂಢಿಸಿಕೊಂಡ ಡಾ.ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಚೇತನ ಎಂದು ಹೇಳಿದರು.
1954ರ ಸುಮಾರಿಗೆ ಚಿತ್ರರಂಗವನ್ನು ಪ್ರವೇಶಿಸಿ 14 ವರ್ಷಗಳಲ್ಲೇ ನೂರಕ್ಕೂ ಹೆಚ್ಚು ಚಿತ್ರಗಳನ್ನು ನೀಡಿದಂತಹ ಡಾ.ರಾಜಕುಮಾರ್ ಅವರ ಬಗ್ಗೆ ಇದುವರೆಗೂ 150ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿದೆ. ಇದು ರಾಜಕುಮಾರ್ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ರಾಜಕೀಯ ಪ್ರವೇಶ ಮತ್ತು ಪರಭಾಷಾ ಚಿತ್ರಗಳ ಅವಕಾಶಗಳು ಮನೆ ಬಾಗಿಲಿಗೆ ಬಂದರೂ ಅದನ್ನು ನಯವಾಗಿ ತಿರಸ್ಕರಿಸಿ ಕನ್ನಡದಲ್ಲೇ ಉಳಿಯುವ ಮೂಲಕ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಸಹಕಾರಿಯಾಗಿದ್ದರು ಎಂದು ಬಣ್ಣಿಸಿದರು.
ಕುವೆಂಪು ಅವರು ಪ್ರಕೃತಿಯಲ್ಲಿ ದೇವರನ್ನು ಕಂಡಂತೆ ರಾಜಕುಮಾರ್ ಅವರು ಅಭಿಮಾನಿಗಳಲ್ಲಿ ದೇವರನ್ನು ಕಂಡರು. ಅವರ ಎಲ್ಲ ಪಾತ್ರಗಳೂ ಸಮಾಜಕ್ಕೆ ಪೂರಕವಾಗಿ ಮತ್ತು ಸಾಮಾಜಿಕ ಬದಲಾವಣೆಗೆ ಪ್ರೇರಕವಾಗಿ ಇದ್ದವು. ಅವರ ಆದರ್ಶ ಇಂದಿನ ಕಲಾಜಗತ್ತಿಗೆ ಪ್ರಸ್ತುತವಾಗಿದೆ. ಇಂದು ಕನ್ನಡ ಚಿತ್ರರಂಗ ಪ್ರೇಕ್ಷಕರ ನಿರುತ್ಸಾಹ ಮತ್ತು ತಿರಸ್ಕಾರ ಭಾವದಿಂದಾಗಿ ಅವನತಿಯ ಹಾದಿ ಹಿಡಿದಿದೆ. ಕನ್ನಡ ಚಿತ್ರರಂಗವನ್ನು ಮತ್ತೆ ಕಟ್ಟಿ ಬೆಳೆಸುವ ಅನಿವಾರ್ಯತೆ ಇದೆ. ಡಾ.ರಾಜಕುಮಾರ್ ಮತ್ತು ಚಿತ್ರರಂಗದ ಇತರೆ ದಿಗ್ಗರ ಮಾದರಿಗಳನ್ನು ಇಟ್ಟುಕೊಂಡು ಕನ್ನಡ ಚಿತ್ರರಂಗಕ್ಕೆ ಘತಕಾಲದ ವೈಭವವನ್ನು ತಂದುಕೊಡಬೇಕು ಎಂದರು.
ಕರವೇ ಜಿಲ್ಲಾಧ್ಯಕ್ಷ ಡಿ.ಅಶೋಕ್ ಮಾತನಾಡಿ, ಹಲವು ವರ್ಷದಿಂದ ಮಂಡ್ಯ ನಗರದಲ್ಲಿ ಡಾ.ರಾಜಕುಮಾರ್ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬಂದಿದ್ದೇವೆ. ಅವರ ಕಲೆಗೆ ಬೆಲೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪುತ್ಥಳಿ ನವೀಕರಣಕ್ಕೆ ಜನಪ್ರತಿನಿಧಿಗಳು ಸ್ಪಂದಿಸಬೇಕು. ಡಾ.ರಾಜಕುಮಾರ್ ಅವರ ಸುದೀರ್ಘ ಕಲಾಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕು. ಆ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಆಟೋ ಚಾಲಕರ ಘಟಕದ ಅಧ್ಯಕ್ಷ ಚಂದ್ರು, ಯುವ ಘಟಕದ ಅಧ್ಯಕ್ಷ ದರ್ಶನ್, ತಾಲೂಕು ಅಧ್ಯಕ್ಷೆ ರೇಣುಕಮ್ಮ, ಮುಖಂಡರಾದ ಎಂ. ಕೃಷ್ಣ, ಎಂ.ವಿ.ಮಂಚಶೆಟ್ಟಿ, ಶಿಕ್ಷಕ ಗೋಪಿನಾಥ್, ಮಂಜುಳಾ, ವೀಣಾ ಮಂಜುನಾಥ್, ಧನಂಜಯ ಇತರರಿದ್ದರು.