ಅಂಬೇಡ್ಕರ್ ಹಿಮಾಲಯ ಪರ್ವತವಿದ್ದಂತೆ: ನಂಜಮ್ಮ ಮೋಟೇಗೌಡ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು ಬಣ್ಣನೆ

ಮಂಡ್ಯ ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ)ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಕೆ.ಎಂ.ಪ್ರಸನ್ನಕುಮಾರ್ ಹಾಗೂ ದ್ವಿತೀಯ ದರ್ಜೆ ಸಹಾಯಕಿ ವೈ.ಎಂ.ಸುಮಿತ್ರಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಡ್ಯ ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ)ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಕೆ.ಎಂ.ಪ್ರಸನ್ನಕುಮಾರ್ ಹಾಗೂ ದ್ವಿತೀಯ ದರ್ಜೆ ಸಹಾಯಕಿ ವೈ.ಎಂ.ಸುಮಿತ್ರಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ
  • ನಂಜಮ್ಮ ಮೋಟೇಗೌಡ ಚಾರಿಟಬಲ್ ಮತ್ತು ಎಜುಕೇಷನ್ ಟ್ರಸ್ಟ್ ಕೊಪ್ಪ, ಕಾಲೇಜಿನ ಆಂಗ್ಲ ಭಾಷಾ ವಿಭಾಗದಿಂದ ಆಯೋಜನೆ
ಮಂಡ್ಯ: ಡಾ.ಬಿ.ಆರ್.ಅಂಬೇಡ್ಕರ್ ಎಂದರೆ ಹಿಮಾಲಯ ಪರ್ವತವಿದ್ದಂತೆ ಎಂದು ನಂಜಮ್ಮ ಮೋಟೇಗೌಡ ಚಾರಿಟಬಲ್ ಮತ್ತು ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು ಬಣ್ಣಿಸಿದರು.
ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ)ನ ಮೌಲ್ಯಮಾಪನ ಸಭಾಂಗಣದಲ್ಲಿ ನಂಜಮ್ಮ ಮೋಟೇಗೌಡ ಚಾರಿಟಬಲ್ ಮತ್ತು ಎಜುಕೇಷನ್ ಟ್ರಸ್ಟ್ ಕೊಪ್ಪ, ಮಹಿಳಾ ಸರ್ಕಾರಿ ಕಾಲೇಜು ಆಂಗ್ಲ ಭಾಷಾ ವಿಭಾಗ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಅಂಗವಾಗಿ ಶಿಕ್ಷಣ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣದಿಂದ ಏನನ್ನಾದರೂ ಸಾಧನೆ ಮಾಡಬಹುದು ಎಂದು ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಇಡೀ ಜಗತ್ತಿಗೆ ತೊರಿಸಿಕೊಟ್ಟವರು. ಅವರು ಎಂದೆಂದಿಗೂ ಕರಗದ ಜ್ಞಾನಶಿಖರ ಎಂದರು.
ಅಂಬೇಡ್ಕರ್ ಅವರು ದೇಶ-ವಿದೇಶಗಳಲ್ಲಿ 32 ಪದವಿ ಪಡೆದಿದ್ದಾರೆ. 9ಭಾಷೆಗಳ ಪಾಂಡಿತ್ಯ ಹೊಂದಿದ್ದರು. ಪ್ರತಿದಿನ 21 ಗಂಟೆ ಅಧ್ಯಯನ ಮಾಡುತ್ತಿದ್ದರು. ಅವರಿಗೆ ಅಷ್ಟು ಆಸಕ್ತಿ, ಶ್ರದ್ದೆ, ಏಕಾಗ್ರತೆ ಇತ್ತು. 140ಕ್ಕೂ ಹೆಚ್ಚು ವಿದೇಶಿ ರಾಷ್ಟ್ರದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಿ ಸ್ಮರಿಸುತ್ತಾರೆ. ವಿದ್ಯಾರ್ಥಿಗಳು ಅಂಬೇಡ್ಕರ್ ಅವರನ್ನು ಕುರಿತು ಓದಿಕೊಳ್ಳಬೇಕು. ಅದರಿಂದ ಜ್ಞಾನವಿಕಾಸಗೊಳ್ಳುತ್ತದೆ ಎಂದು ಹೇಳಿದರು.
ಕಳೆದ 16 ವರ್ಷದಿಂದ ಟ್ರಸ್ಟ್ ವತಿಯಿಂದ ಹತ್ತಾರು ಪ್ರಶಸ್ತಿಗಳನ್ನು ನೀಡುತ್ತಿದ್ದೇವೆ. ಪ್ರಮುಖವಾಗಿ ಅಂಬೇಡ್ಕರ್ ಶಿಕ್ಷಣ ಸೇವಾ ಪ್ರಶಸ್ತಿಯನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವರಿಗೆ ನೀಡುತ್ತಿದ್ದೇವೆ. ಶಾಲಾ-ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಮೂಲಕ ಅಭಿನಂದಿಸುತ್ತಿದ್ದೇವೆ ಎಂದು ತಿಳಿಸಿದರು.
ಸಹಾಯಕ ಪ್ರಾಧ್ಯಾಪಕ ಎಸ್.ನವೀನ್ ಮಾತನಾಡಿ, ಅಂಬೇಡ್ಕರ್ ಅವರು ಸಾಮಾನ್ಯ ವ್ಯಕ್ತಿಯಲ್ಲ. ಬದಲಿಗೆ ಜಗತ್ತಿನ ಸಿದ್ಧಾಂತ ಮತ್ತು ವಿಶ್ವಜ್ಞಾನ. ಅವರನ್ನು ಕುರಿತು ಈ ಜಗತ್ತೇ ಓದುತ್ತದೆ, ಅವರ ಸಿದ್ಧಾಂತ ಮತ್ತು ಅಗಾಧ ಜ್ಞಾನವನ್ನು ಅಳವಡಿಸಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು ಏ.14ರಂದು ಒಂದು ದಿನ ಆಚರಿಸಿ, ಉಳಿದ ದಿನಗಳು ಮರೆಯುತ್ತಿದ್ದೇವೆ. ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧೀಜಿ, ಕುವೆಂಪು ಸೇರಿದಂತೆ ಹಲವರನ್ನು ಒಂದೊಂದು ವರ್ಗಗಳಿಗೆ ಸೀಮಿತ ಮಾಡಿದ್ದೇವೆ. ಅಂಬೇಡ್ಕರ್ ಕೊಟ್ಟ ಮೀಸಲಾತಿಯಿಂದ ಎಲ್ಲ ಜನಾಂಗವು ಪ್ರಗತಿ ಕಾಣುತ್ತಿವೆ. ಸಂವಿಧಾನದಿಅದ ಎಲ್ಲವೂ ಸೌಲಭ್ಯ ಲಭ್ಯವಾಗುತ್ತಿವೆ. ಮತದಾನದ ಸಮಾನತೆ ಮಾತ್ರ ಸಮಾಜಿಕ ವ್ಯವಸ್ಥೆಯಲ್ಲಿದೆ. ಉಳಿದವು ಅಸಮಾನತೆಯಲ್ಲಿವೆ ಎಂದು ಹೇಳಿದರು.
ಪ್ರಾಂಶುಪಾಲ ಪ್ರೊ.ಕೆ.ಗುರುರಾಜಪ್ರಭು ಅಧ್ಯಕ್ಷತೆ ವಹಿಸಿದ್ದರು. ಆಂಗ್ಲಭಾಷಾ ವಿಭಾಗ ಮುಖ್ಯಸ್ಥ ಟಿ.ಆರ್.ದೀಪಕ್, ಕಾಲೇಜು ಪತ್ರಾಂಕಿತ ವ್ಯವಸ್ಥಾಪಕ ಕೆ.ಪಿ.ರವಿಕಿರಣ್, ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ 1ನೇ ಜಿಲ್ಲಾ ಪ್ರಾಂತಪಾಲ ಕೆ.ಎಸ್.ಚಂದ್ರಶೇಖರ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಜಿ.ಧನಂಜಯ ದರಸಗುಪ್ಪೆ ಇತರರಿದ್ದರು. ಇದೇ ಸಂದರ್ಭದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ.ಎಂ.ಪ್ರಸನ್ನಕುಮಾರ್ ಹಾಗೂ ದ್ವಿತೀಯ ದರ್ಜೆ ಸಹಾಯಕಿ ವೈ.ಎಂ.ಸುಮಿತ್ರಾ ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net