ಪ್ರಪಂಚ ಸುತ್ತಾಡಿದ್ದೇ ಮೋದಿ ಸಾಧನೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯ

ಮಂಡ್ಯದಲ್ಲಿ ಆಯೋಜಿಸಿದ್ದ ಯುವ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಯುವ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಯುವ ಸಮ್ಮೇಳನ
  • ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಕಾರ್ಯಕ್ರಮ
  • ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಆಯೋಜನೆ
ಮಂಡ್ಯ: ಹನ್ನೊಂದು ವರ್ಷದಿಂದ ದೇಶದ ಪ್ರಧಾನಿಯಾಗಿ ಅಧಿಕಾರ ನಡೆಸುತ್ತಿರುವ ನರೇಂದ್ರ ಮೋದಿ ಅವರು 8 ಸಾವಿರ ಕೋಟಿ ರೂ ವೆಚ್ಚದ ವಿಮಾನದಲ್ಲಿ ಇಡೀ ಪ್ರಪಂಚವನ್ನು ಸುತ್ತಾಡಿರುವುದು ಮತ್ತು 56 ಲಕ್ಷ ಕೋಟಿ ರೂಗಳಿದ್ದ ಸಾಲವನ್ನು 3 ಲಕ್ಷ ಕೋಟಿ ರೂ.ಗೆ ಹೆಚ್ಚಳ ಮಾಡಿರುವುದೇ ಮಹಾನ್ ಸಾಧನೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಯುವ ಸಮ್ಮೇಳನ ಉದ್ಘಾಟಿಸಿ ‘ಮನರೇಗಾ ಬಚಾವೊ ಸಂಗ್ರಾಮ್’ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪೆಟ್ರೋಲ್ ಮತ್ತು ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ ಮಾಡಿದ್ದಾರೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆಯೇ ಹೊರತು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ಬ್ರಿಟಿಷರಿಗಿಂತ ಅತ್ಯಂತ ಕೆಟ್ಟ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮನರೇಗಾ ಯೋಜನೆಯನ್ನು ಕೇಂದ್ರೀಕೃತಗೊಳಿಸಿ, ವಿಶ್ವದ ಮಹಾನ್ ನಾಯಕ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಅಳಿಸಲು ಹೊರಟಿದೆ. ಕಾರ್ಮಿಕರ ಘನತೆ, ಗ್ರಾಮ ಸ್ವರಾಜ್ಯ ಮತ್ತು ರಾಷ್ಟ್ರದ ನೈತಿಕ ಜವಾಬ್ದಾರಿಯನ್ನು ನಾಶಪಡಿಸಿದೆ. ಈ ಕಾಯ್ದೆಯನ್ನು ಹಿಂಪಡೆಯಬೇಕು ಮತ್ತು ಮೂಲ ಮನರೇಗಾ ಕಾಯ್ದೆಯನ್ನು ಮರಳಿ ಜಾರಿಗೊಳಿಸುವವರೆಗೂ ಹೋರಾಟ ನಡೆಸಲಾಗುವುದು ಎಂದರು.
ಪ್ರತಿ ಹಳ್ಳಿ ಹಳ್ಳಿಯಲ್ಲೂ ನರೇಗಾ ಬಚಾವೋ ಹೋರಾಟ ನಡೆಸಿ, ‘ವಿಬಿ ಜಿ ರಾಮ್ ಜಿ’ ಯೋಜನೆಯಿಂದ ಆಗುವ ಅನ್ಯಾಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದರ ಜತೆಗೆ ಈ ಕಾಯ್ದೆಗೆ ಬೆಂಬಲವಾಗಿ ನಿಂತಿರುವ ಜಾತ್ಯತೀತ ಜನತಾದಳವನ್ನು ಸಹ ಕಿತ್ತೊಗೆಯಬೇಕು. ‘ವಿಬಿ ಜಿ ರಾಮ್ ಜಿ’ಯಿಂದ ಕೂಲಿಕಾರರಿಗೆ ಅನ್ಯಾಯವಾಗುತ್ತಿರುವುದು ಗೊತ್ತಿದ್ದರೂ ಎನ್‌ಡಿಎ ಮೈತ್ರಿಕೂಟದಲ್ಲಿ ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಯೋಜನೆಯನ್ನು ಸಮರ್ಥಿಸಿಕೊಳ್ಳುವ ಮೂಲಕ ಮೌನ ವಹಿಸಿದ್ದಾರೆ ಎಂದು ಛೇಡಿಸಿದರು.
ಎನ್‌ಡಿಎ ಜೊತೆ ಜಾ.ದಳದವರು ಹೋಗದಿದ್ದರೆ ಈ ನೂತನ ಕಾಯ್ದೆ ವಿರುದ್ಧ ಮೊದಲು ಬೀದಿಗಿಳಿಯುತ್ತಿದ್ದರು. ಆದರೆ, ಅವರಿಗೆ ಕೇಂದ್ರ ಸಚಿವ ಸ್ಥಾನ ಕೊಟ್ಟಿರುವುದರಿಂದ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಕ್ಕಾಗಿ ಯಾರ ಜೊತೆಗಾದರೂ ಕೈಜೋಡಿಸುವ ಇಂತಹವರಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿಲ್ಲ. ಆದ್ದರಿಂದ ಜಿಲ್ಲೆಯಿಂದ ಜಾತ್ಯಾತೀತ ಜನತಾದಳವನ್ನು ಕಿತ್ತೊಗೆಯಬೇಕೆಂದು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಕರೆ ನೀಡಿದ ಸಚಿವ ಸಿಆರ್‌ಎಸ್, ಕೇಂದ್ರ ಸರ್ಕಾರವು ಮನ್ರೇಗಾ ಕಾಯ್ದೆಯನ್ನು ವಾಪಸ್ ಪಡೆಯುವ ಮೂಲಕ ಗ್ರಾಮೀಣ ಭಾಗದ ಜನರ ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳುವ ಕೆಲಸವನ್ನು ಮಾಡಿದೆ. ಮನರೇಗಾ ಮೂಲಕ ಪಂಚಾಯಿತಿಗಳಲ್ಲಿ ಆಸ್ತಿ ನಿರ್ಮಾಣವಾಗುತ್ತಿತ್ತು. ಗ್ರಾಮಗಳಲ್ಲಿ ಯಾವ ಕೆಲಸವಾಗಬೇಕೆಂದು ತೀರ್ಮಾನಿಸುವ ಅಧಿಕಾರ ಪಂಚಾಯಿತಿಗಳಿಗಿತ್ತು. ಈಗ ಅದನ್ನು ಸಂಪೂರ್ಣವಾಗಿ ಕಿತ್ತುಕೊಂಡು ಕೆಲಸ ಎಲ್ಲಿ ಆಗಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಲಿದೆ. ಮೇಲ್ನೋಟಕ್ಕೆ 125 ದಿನ ಕೆಲಸ ನೀಡುವುದು ಎಂದಿದ್ದರೂ, ಕೆಲಸ ಸಿಗುವುದೇ ಅನುಮಾನ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೇ. 50ರಷ್ಟು ಯುವಜನತೆಗೆ ಅವಕಾಶ ನೀಡಲಾಗುವುದು. ಅದಕ್ಕೂ ಮುನ್ನ ತಮ್ಮ ಸಾಮರ್ಥ್ಯವನ್ನು ತೋರಿಸಬೇಕು. ಆಗ ನಾವೇ ಗುರುತಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದರು.
ಮದ್ದೂರು ಶಾಸಕ ಕೆ.ಎಂ.ಉದಯ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ, ಉಪಾಧ್ಯಕ್ಷ ಚಲುವರಾಜು, ಮನ್‌ಮುಲ್ ನಿರ್ದೇಶಕ ಎನ್.ಅಪ್ಪಾಜಿಗೌಡ, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಯುವ ಕಾಂಗ್ರೆಸ್ ಉಸ್ತುವಾರಿ ನಿಗಮ್ ಭಂಡಾರಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶೈಲೇಂದ್ರ ಕುಮಾರ್, ಕಾಂಗ್ರೆಸ್ ಮುಖಂಡರಾದ ಆರ್.ವಿ.ದೇವರಾಜು, ಸತೀಶ್ ಸಿದ್ದಾರೂಢ, ಅಂಜನಾ ಶ್ರೀಕಾಂತ್, ಸಿ.ಎಂ.ದ್ಯಾವಪ್ಪ ಇತರರಿದ್ದರು.

ಕೂಲಿಕಾರರನ್ನು ಬೀದಿ ತಳ್ಳಿದ್ದಾರೆ

ಶಾಸಕ ಪಿ.ರವಿಕುಮಾರ್ ಗಣಿಗ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೇಶವನ್ನು ಹರಾಜು ಮತ್ತು ಅಡವಿಡುವುದನ್ನು ಬಿಟ್ಟು ಉಳಿದೆಲ್ಲ ಕೆಲಸವನ್ನು ಮಾಡುತ್ತಿದೆ. ಕೋಟ್ಯಂತರ ಕೂಲಿಕಾರರ ಜೀವನಕ್ಕೆ ಆಸರೆಯಾಗಿದ್ದ ಮನರೇಗಾ ಯೋಜನೆಯನ್ನು ರದ್ದುಪಡಿಸಿ, ವಿಬಿ ಜಿ ರಾಮ್ ಜಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಕೂಲಿಕಾರರಿಗೆ ಕೊನೆಯ ಮೊಳೆ ಹೊಡೆದಿದೆ ಎಂದು ಆರೋಪಿಸಿದರು.
ಬಡವರಿಗೆ ಕೂಲಿ ಕೊಡದೆ ಬೀದಿಗೆ ತಳ್ಳಿದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಅಳಿಸಿ ಹಾಕಿ ‘ವಿಬಿ ಜೀ ರಾಮ್ ಜೀ’ ಎಂಬ ಹೆಸರಿನಲ್ಲಿ ಕೂಲಿಕಾರರ ಹೊಟ್ಟೆಯ ಮೇಲೆ ಹೊಡೆಯಲಾಗಿದೆ. ಇದರ ವಿರುದ್ಧ ಹೋರಾಟ ಅನಿವಾರ್ಯವಾಗಿದ್ದು, ಪ್ರತಿ ಹಳ್ಳಿ ಹಳ್ಳಿಯಲ್ಲೂ ಹೋರಾಟ ನಡೆಸಬೇಕು. ಹಿಂದೂ ಮತ್ತು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೆರೆಯ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿ, ಕೊಲೆ ಮಾಡುತ್ತಿದ್ದರೂ ಮೌನ ವಹಿಸಿದ್ದಾರೆ. ಚುನಾವಣೆ ಬಂದಾಗ ಇಂತಹ ಅವಕಾಶವನ್ನು ಉಪಯೋಗಿಸಿಕೊಳ್ಳುತ್ತಾರೆ. ಸುಳ್ಳು ಹೇಳುವುದೇ ಇವರ ಕಾಯಕವಾಗಿದೆ ಎಂದರು.

ಬಡವರ ಪರ ದನಿ ಎತ್ತುತ್ತಿಲ್ಲ

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್‌ಗೌಡ ಮಾತನಾಡಿ, ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದರೂ ಬಡವರ ಪರ ಮತ್ತು ಮಂಡ್ಯ ಜಿಲ್ಲೆಯ ಅಭಿವೃದ್ಧಿ ಪರ ತುಟಿ ಬಿಚ್ಚುತ್ತಿಲ್ಲ. ಜಾತ್ಯಾತೀತ ಜನತಾದಳ ಒಂದು ನಾಟಕ ಕಂಪನಿಯಿದ್ದಂತೆ. ಅಧಿಕಾರ ಮತ್ತು ತಮ್ಮ ಖಜಾನೆಯನ್ನು ಭರ್ತಿ ಮಾಡಿಕೊಳ್ಳಲು ಯಾರ ಜತೆಯಾದರೂ ಕೈಜೋಡಿಸುತ್ತಾರೆ. ಜಿಲ್ಲೆಯಲ್ಲಿ ನಾಯಕರನ್ನು ಬೆಳೆಸದೆ ತಮ್ಮ ಮಕ್ಕಳನ್ನು ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ. ಇದರ ವಿರುದ್ಧ ಸಚಿವ ಎನ್.ಚಲುವರಾಯಸ್ವಾಮಿ ಅವರು ಹೋರಾಟ ಮಾಡುವ ಮೂಲಕ ಜಿಲ್ಲೆಯನ್ನು ಉಳಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಮಣ್ಣಿನಲ್ಲಿ ಹೋರಾಟದ ಗುಣ ಇದೆ. ಮಂಡ್ಯದಲ್ಲಿ ಕ್ರಾಂತಿಯಾದರೆ ಇಡೀ ರಾಷ್ಟ್ರದಲ್ಲೇ ಕ್ರಾಂತಿ ಆಗುತ್ತದೆ. ಬಿಜೆಪಿಯವರು ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚಿದರೆ ದಳದ ನಾಯಕರು ಗ್ರಾಮ ಗ್ರಾಮಗಳ ನಡುವೆ ಬೆಂಕಿ ಹಚ್ಚುತ್ತಿದ್ದಾರೆ ಎಂದು ಆರೋಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net