ಮಹಿಳೆಯರನ್ನು ಸ್ವಾವಲಂಬಿಗೊಳಿಸಲು ಯೋಜನೆ: ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿಕೆ
ಮಂಡ್ಯ ತಾಲೂಕು ಕೆರಗೋಡು ಗ್ರಾಮದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಬಹುಮಾನ ವಿತರಿಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕೆರಗೋಡು ಗ್ರಾಮದಲ್ಲಿ ಸ್ತ್ರೀಶಕ್ತಿ ಸಂಭ್ರಮ
ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ಆಯೋಜನೆ
ಮಂಡ್ಯ:ಮಹಿಳೆಯನ್ನು ಸ್ವಾವಲಂಬಿಯಾದರೆ ಆಕೆಯ ಇಡೀ ಕುಟುಂಬ ಅಭಿವೃದ್ಧಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಅಭಿಪ್ರಾಯಪಟ್ಟರು.
ತಾಲೂಕಿನ ಕೆರಗೋಡು ಗ್ರಾಮದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮಹಿಳೆಯರಿಗೆ ವಿವಿಧ ಸ್ಪರ್ಧೆ ಮತ್ತು ಸ್ತ್ರೀ ಶಕ್ತಿ ಸಂಭ್ರಮ ಸಮಾರಂಭದ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಕುಟುಂಬ ನಿರ್ವಹಣೆ ಸುಗಮವಾಗಿ ಸಾಗಲು ಮಹಿಳೆಯರ ಆರ್ಥಿಕ ಚಿಂತನೆಗಳು ಸಹಕಾರಿಯಾಗುತ್ತದೆ ಎಂದರು.
ಮಹಿಳೆಯಲ್ಲಿ ಸ್ವಾವಲಂಬಿಯಾಗಿ ಮಾಡಲು ದೊಡ್ಡಮಟ್ಟದ ಕಾರ್ಯಕ್ರಮ ರೂಪುಗೊಳ್ಳಲಿದೆ. ಇನ್ನು ಎರಡು ತಿಂಗಳಲ್ಲಿ 25 ಸಾವಿರ ಮಹಿಳೆರನ್ನು ಸೇರಿಸಿ ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುವುದು. ಒಟ್ಟಾರೆ ಮಹಿಳೆಯರ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಲು ಹಾಗೂ ಸ್ವ ಉದ್ಯಮಿಗಳನ್ನಾಗಿ ಮಾಡಲು ಯೋಜನೆ ರೂಪಿಸಲಾಗುವುದು. ಆ ಮೂಲಕ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶುಭದಾಯಿನಿ ಮಾತನಾಡಿ, ಕಾಂಗ್ರೆಸ್ ಸರ್ಕಾರದಿಂದ ಮಹಿಳಾ ಸಬಲೀಕರಣ ಹೆಚ್ಚಾಗುತ್ತಿದೆ. ಆರ್ಥಿಕ ಪ್ರಗತಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಪ್ರತಿ ಮನೆಯ ಯಜಮಾನಿಗೆ 2000 ರೂ ಬರುತ್ತಿದೆ. ಸಾರಿಗೆ ಸೌಲಭ್ಯ ಉಚಿತವಾಗಿದೆ. ಇದರಿಂದ ಹಣ ಉಳಿತಾಯವಾಗುತ್ತಿದೆ. ಐದು ಗ್ಯಾರಂಟಿ ಯೋಜನೆಗಳು ಕುಟುಂಬದ ಆದಾಯವನ್ನು ಹೆಚ್ಚಿಸುತ್ತಿದೆ. ಕುಟುಂಬದ ಖರ್ಚುಗಳನ್ನು ಕಡಿಮೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಅಭಿವೃದ್ದಿ ಯೋಜನೆಗಳು ಜನರ ಕಣ್ಣಿಗೆ ಕಾಣುತ್ತಿವೆ. ಇದು ಅಭಿವೃದ್ದಿಯ ಪರ್ವ ಎಂದು ಹೇಳಿದರು.
ಮಹಿಳೆಯರನ್ನು ಸಂಘಟಿಸಿ, ಕ್ರೀಯಾಶೀಲರನ್ನಾಗಿಸುವ ದೃಷ್ಠಿ ಮತ್ತು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಪ್ರೋತ್ಸಾಹ ನೀಡಲಾಗುತ್ತಿದೆ. ಅದಂತೆ ಸಾವಿರಾರು ಮಹಿಳೆಯರು ಸ್ಪಂದಿಸಿ ಸಹಕಾರ ನೀಡಿದಕ್ಕಾಗಿ ಧನ್ಯವಾದಗಳು ಎಂದರು.
ಕಾಂಗ್ರೆಸ್ ಮುಖಂಡ ವಸಂತಕುಮಾರ್ ಮಾತನಾಡಿ, ಕೆರಗೋಡು ಹೋಬಳಿ ಅಭಿವೃದ್ದಿಗಾಗಿ ಶಾಸಕರು ಕೋಟ್ಯಂತರ ರೂ ಅನುದಾನ ನೀಡಿದ್ದಾರೆ. ರಸ್ತೆ, ನಾಲೆ, ಕೆರೆಗಳು, ಚರಂಡಿ ಅಭಿವೃದ್ದಿಗೆ ಆದ್ಯತೆ ನೀಡಲಾಗಿದೆ. ಸಮಯರತ್ನ ಬಿರುದಿಗೆ ಪಾತ್ರವಾಗಿರುವ ಶಾಸಕ ಪಿ.ರವಿಕುಮಾರ್ ಅವರಿಗೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಹೆಚ್ಚಿನ ಅವಕಾಶ ಸಿಗಲಿ ಎಂದರು.
ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಚಿಕ್ಕಬಳ್ಳಿ ಕೃಷ್ಣ, ಪ್ರಶಾಂತ್‌ಬಾಬು, ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್, ಶಿವ ನಾಗರಾಜ, ಶೈಲೇಂದ್ರ ಇತರರಿದ್ದರು.
ಕೆರಗೋಡು, ಮಾರಗೌಡನಹಳ್ಳಿ, ಹೊಡಾಘಟ್ಟ, ಹುಲಿವಾನ ಗ್ರಾ.ಪಂಗಳಿಗೆ ಮಾತ್ರ ಈ ಸ್ಪರ್ಧೆ ಸೀಮಿತಗೊಳಿಸಲಾಗಿತ್ತು. ಅಂತೆಯೇ ರಂಗೋಲಿ, ಹಗ್ಗಜಗ್ಗಾಟ, ಬಿಂದಿಗೆ ಓಟ, ಮ್ಯೂಸಿಕಲ್ ಚೇರ್, ಇಂಧನ ರಹಿತ ಅಡುಗೆ ಸ್ಪರ್ಧೆ ನಡೆಯಿತು. ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು.
ರಂಗೋಲಿಯಲ್ಲಿ ಶಾಸಕರ ಚಿತ್ರ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಅವರ ಬೃಹದಾಕಾರದ ಚಿತ್ರ ಬಿಡಿಸಲಾಗಿತ್ತು. ನೀಲಿ ಮತ್ತು ಹಳದಿ ಬಣ್ಣವನ್ನು ಬಳಸಿಕೊಂಡು ಚಿತ್ರ ಬಿಡಿಸಲಾಗಿತ್ತು.