ಮಂಡ್ಯ: ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್ ಅವರ ವಿರುದ್ಧ ನಾವು ಎಲ್ಲಿಯೂ ಭ್ರಷ್ಟಾಚಾರದ ಆರೋಪ ಮಾಡಿಲ್ಲ. ಆದರೆ ಅಕ್ರಮವಾಗಿ ಆಡಳಿತ ಮಂಡಳಿಯಲ್ಲಿ ಮುಂದುವರೆಯದಂತೆ ಆಗ್ರಹಿಸಿದ್ದೇವೆ ಎಂದು ಸಂಘದ ನಿರ್ದೇಶಕ ಕೃಷ್ಣ ಸ್ಪಷ್ಟಪಡಿಸಿದರು.
ಆಡಳಿತ ಮಂಡಳಿಯ ಅಧಿಕಾರಾವಧಿಯು ಮುಕ್ತಾಯಗೊಂಡಿದೆ. ಅನಗತ್ಯವಾಗಿ ಮುಂದುವರೆಯದೇ ಚುನಾವಣೆ ನಡೆಸುವಂತೆ ಆಗ್ರಹಿಸಿದ್ದೇವೆ. ಆದರೆ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್ ನಮ್ಮ ವಿರುದ್ದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಶಿಧರ್ ಅವರು ತಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆಂದು ಅನಗತ್ಯವಾಗಿ ಕುರುಬ ಸಮಾಜದ ದಿಕ್ಕು ತಪ್ಪಿಸುತ್ತಿದ್ದಾರೆ. ಆದರೆ ಸಾಮಾನ್ಯ ಸಭೆಯ ನಂತರ ಡಿಆರ್ ಅವರಿಗೆ ಭ್ರಷ್ಟಾಚಾರ ಸಂಬಂಧ ದೂರು ನೀಡಿಲ್ಲ. ಸುದ್ದಿಗೋಷ್ಠಿಯಲ್ಲಿಯೂ ಆಡಿಟ್ ವರದಿಯನ್ನೂ ಒಪ್ಪಿಕೊಂಡಿದ್ದೆವು. ಜ.13ರಂದು ಸಹಕಾರ ಸಂಘಗಳ ಇಲಾಖೆಗೆ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದೇವೆ ಎಂದರು.
ಸಮಾಜದ ಜನರ ಮುಗ್ದತೆ ಬಳಸಿಕೊಂಡು ದಾರಿ ತಪ್ಪಿಸುವ ಕೆಲಸ ಆಡಳಿತ ಮಂಡಳಿ ಮಾಡುತ್ತಿದೆ. ಇದನ್ನು ಬಿಟ್ಟು ಸಹಕಾರ ನಿಯಮಗಳು ಹಾಗೂ ಸಂಘದ ಬೈಲಾದಂತೆ ಚುನಾವಣೆ ನಡೆಸಬೇಕು. ಇಲ್ಲವಾದಲ್ಲಿ ಕಾನೂನಾತ್ಮ ಕ್ರಮ ವಹಿಸಲಾಗುವುದು. ಜತೆಗೆ ಉಗ್ರ ಪ್ರತಿಭಟನೆ ಮಾಲಾಗುವುದು. ಸಂಘದ ಆವರಣದಲ್ಲಿ ವಿದ್ಯಾರ್ಥಿ ನಿಲಯಕ್ಕೆ ಸರ್ಕಾರದಿಂದ 2.25 ಕೋಟಿ ರೂ ಅನುಮೋದನೆ ದೊರೆತಿದೆ. ಮುಂಗಡವಾಗಿ 50 ಲಕ್ಷ ರೂ ಬಿಡುಗಡೆ ಮಾಡಿದೆ. ಯಾವುದೇ ಸರ್ಕಾರ ಸಾಮ್ಯದ ಸಂಸ್ಥೆಗಳಿಂದ ಕಾಮಗಾರಿ ನಡೆಸದೇ, ಟೆಂಡರ್ ಕರೆಯದೇ ವ್ಯಯ ಮಾಡಲಾಗಿದೆ. ದಾನಿಗಳಿಂದ ಬಂದ ದೇಣಿಗೆಯ ಮಾಹಿತಿಯನ್ನೂ ಸಂಘದ ಸದಸ್ಯರ ಗಮನಕ್ಕೆ ತಂದಿಲ್ಲವೆಂದು ಆರೋಪಿಸಿದರು.
ಆರು ಕೋಟಿ ರೂ ವೆಚ್ಚದಲ್ಲಿ ನೂತನ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲಾಗುತ್ತಿದೆ. ಸರ್ಕಾರದ ಅನುದಾನ ಹೊರತುಪಡಿಸಿ ಉಳಿದ ಅನುದಾನವನ್ನು ಯಾವ ಮೂಲದಿಂದ ತರುತ್ತಾರೆ ಎಂಬುದು ತಿಳಿಸಲಾಗಿಲ್ಲ. ಈ ಸಂಬಂಧ ಇದುವರೆಗೆ ಏಕೆ ಪರ್ಚಸ್ ಕಮಿಟಿ ಮಾಡಿಲ್ಲ. ದಾನಿಗಳಿಂದ ಬಂದ ನೆರವು ಎಷ್ಟು ಎಂಬ ಬಗ್ಗೆ ಮಾಹಿತಿ ಬಿಡುಗಡೆ ಮಾಡದಿರುವುದಕ್ಕೆ ಕಾರಣ ಏನು. ಅಥವಾ ಯಾವ ದಾನಿಗಳು ಇದುವರೆಗೆ ನೆರವು ನೀಡಿಲ್ಲವೇ?. ನೀವೇ ಕಾಮಗಾರಿ ನಡೆಸುತ್ತಿರುವುದರಿಂದ ಇದುವರೆಗೆ ಸಮಾಜದ ಮುಖಂಡರ ಕಮಿಟಿ ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.