ಚುನಾವಣಾಧಿಕಾರಿಯಾಗಿ ಸಿಇಒ ಎಂ.ಎಚ್.ಚಂದ್ರು ಕರ್ತವ್ಯ ನಿರ್ವಹಣೆ
ಮಂಡ್ಯ: ಜಿಲ್ಲಾ ಖಾಸಗಿ ಶಾಲಾ ನೌಕರರ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಟಿ.ಚಂದ್ರಶೇಖರ, ಉಪಾಧ್ಯಕ್ಷರಾಗಿ ಶಿವಶಂಕರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಶಾಲಾ ಶಿಕ್ಷಣ ಇಲಾಖೆ ಕಚೇರಿ ಹಿಂಭಾಗದ ಆವರಣದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಂ.ಟಿ.ಚಂದ್ರಶೇಖರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಿವಶಂಕರ್ ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆದ ಸಿಇಒ ಎಂ.ಎಚ್.ಚಂದ್ರು ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಎಂ.ಟಿ.ಚಂದ್ರಶೇಖರ್ ಮಾತನಾಡಿ, ಸಹಕಾರಿ ಬಂಧುಗಳು ಮತ್ತು ಎಲ್ಲ ಹಿರಿಯ ನಿರ್ದೇಶಕರ ಸಹಕಾರದೊಂದಿಗೆ ಉತ್ತಮ ಆಡಳಿತ ನೀಡುತ್ತೇವೆ. ಅಭಿವೃದ್ಧಿಗೆ ಎಲ್ಲರ ಸಹಕಾರ ಅತ್ಯಗತ್ಯ. ಸಾಲ ಸೌಲಭ್ಯ, ವಸೂಲಾತಿಗೆ ಮೊದಲ ಆದ್ಯತೆ ನೀಡುತ್ತೇವೆ. ಸಹಕಾರ ಸಂಘದ ಬೆಳವಣಿಗೆಗೆ ಮೂಲಾಧಾರ ಆರ್ಥಿಕ ಸಬಲೀಕರಣ. ಸಂಘದಿಂದ ಸಾಲ ಸೌಲಭ್ಯ ಪಡೆದ ಫಲಾನುಭವಿಗಳು ಅವಧಿ ಮೀರುವ ಮೊದಲು ಸಕಾಲದಲ್ಲಿ ಮರುಪಾವತಿ ಮಾಡುವುದು ಉತ್ತಮ. ಇನ್ನೊಬ್ಬರಿಗೆ ನೆರವು ನೀಡಲು ಸಹಕಾರವಾಗುತ್ತದೆ ಎಂದು ಮನವಿ ಮಾಡಿದರು.
ಕಾರ್ಯನಿರ್ವಹಣಾಧಿಕಾರಿ ಎಂ.ಎಚ್.ಚಂದ್ರು ಮಾತನಾಡಿ, ಎಲ್ಲರ ಒಮ್ಮತದ ಸಹಕಾರ ಲಭ್ಯವಾದರೆ ಜಿಲ್ಲೆಯಲ್ಲಿಯೇ ಪ್ರಥಮ ಸಹಕಾರ ಸಂಘವಾಗಿ ಬೆಳೆಯಲಿದೆ. ಸಾಲ ಪಡೆದವರು ಸಕಾಲದಲ್ಲಿ ಮರು ಪಾವತಿಸುತ್ತಿಲ್ಲ. ನೋಟಿಸ್ ಮತ್ತು ಲೀಗಲ್ ನೋಟಿಸ್‌ಗೂ ಮನ್ನಣೆ ನೀಡದೆ ಸಾಲ ತೀರಿಸದೆ, ಮೀನಮೇಷ ಎಣಿಸುವುದು ಬೇಡ. ಸರಿಯಾದ ಸಮಯಕ್ಕೆ ಮರುಪಾವತಿಸಿ ಎಂದು ಮನವಿ ಮಾಡಿದರು.
ನಿಕಟಪೂರ್ವ ಅಧ್ಯಕ್ಷ ವೈ.ಜೆ.ರಾಮಲಿಂಗೇಗೌಡ, ಮಾಜಿ ಉಪಾಧ್ಯಕ್ಷ ರಾಮಲಿಂಗಯ್ಯ, ನಿರ್ದೇಶಕರಾದ ಅಶೋಕ್, ಎನ್.ಕೃಷ್ಣ, ಚಂದ್ರ, ಎಂ.ಕೆ.ಪ್ರತಿಮಾರಾಣಿ, ಡಿ.ಬಸವರಾಜು, ಎಚ್.ಪಿ.ಮಂಜುಳಾ, ಎಂ.ಎನ್.ರವಿ, ಎಂ.ಎನ್.ರಾಜಲಕ್ಷ್ಮೀ, ಕೆ.ಆರ್.ಲಕ್ಷ್ಮೀಶ, ಜಿ.ಎನ್.ಸುಧಾನ್, ಎಸ್.ಯೋಗೇಶ್, ಶಿವಕುಮಾರ್ ಇತರರಿದ್ದರು.