ವಿಜ್ಞಾನ ಮಾನವೀಯತೆಯೊಂದಿಗೆ ಬೆಸೆದುಕೊಳ್ಳಲಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ.ವಿಜಯಲಕ್ಷ್ಮೀ ದೇಶಮಾನೆ ಅಭಿಮತ

ಮಂಡ್ಯದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಮಹಿಳಾ ವೈಜ್ಞಾನಿಕ ಜಾಗೃತಿ ಸಮಾವೇಶವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ.ವಿಜಯಲಕ್ಷ್ಮೀ ದೇಶಮಾನೆ ಉದ್ಘಾಟಿಸಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಮಹಿಳಾ ವೈಜ್ಞಾನಿಕ ಜಾಗೃತಿ ಸಮಾವೇಶವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ.ವಿಜಯಲಕ್ಷ್ಮೀ ದೇಶಮಾನೆ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಮಹಿಳಾ ವೈಜ್ಞಾನಿಕ ಜಾಗೃತಿ ಸಮಾವೇಶ

ಮಂಡ್ಯ:

ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಪ್ರಪಂಚ ವೇಗವಾಗಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮಾನವೀಯತೆಯೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಬೆಸೆದುಕೊಳ್ಳಲಿ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ.ವಿಜಯಲಕ್ಷ್ಮೀ ದೇಶಮಾನೆ ಅಭಿಪ್ರಾಯಪಟ್ಟರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಮಹಿಳಾ ವೈಜ್ಞಾನಿಕ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಂತ್ರಿ ನರೇಂದ್ರ ಮೋದಿ ಅವರು ವಿಜ್ಞಾನಕ್ಕೆ ಒತ್ತು ನೀಡುತ್ತಿದ್ದಾರೆ. ವಿಜ್ಞಾನಿಗಳು ಮುಂದೆ ಬರಬೇಕು ಎನ್ನುವುದು ಅವರ ಕನಸಾಗಿದೆ. ಕೇಂದ್ರ ಸರ್ಕಾರದಿಂದ ರಾಜಸ್ಥಾನದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿಯಲ್ಲಿ ವಿಜ್ಞಾನದ ಸಂಶೋಧನೆ ನಡೆಸಲಾಗುತ್ತಿದೆ ಎಂದರು.
ತಮಗೆ ಪದ್ಮಶ್ರೀ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ತಿಳಿಸಿದ ಡಾ.ವಿಜಯಲಕ್ಷ್ಮೀ ದೇಶಮಾನೆ, ಸಮಾಜ ನಿರ್ಮಾಣದಲ್ಲಿ ಹೆಣ್ಣು ಮಕ್ಕಳಿಗೆ ಮಾತ್ರ ಜವಾಬ್ದಾರಿ ಅಲ್ಲ. ಪುರುಷರು ಮತ್ತು ಮಹಿಳೆಯರಿಬ್ಬರ ಪಾಲ್ಗೊಳ್ಳುವಿಕೆಯೂ ಅತ್ಯಂತ ಮುಖ್ಯ. ಆಗ ಉತ್ತಮ ಸಮಾಜ ನಿರ್ಮಾಣವಾಗುವುದು. ದೇವರು ಕೊಟ್ಟಿರುವ ಮಾನವ ಜನ್ಮವನ್ನು ಸುಮ್ಮನೆ ಖಾಲಿ ಮಾಡಿಕೊಂಡು ಹೋಗಬಾರದು. ಏನಾದರೂ ಸಾಧನೆ ಮಾಡಿಕೊಂಡು ಹೋಗಬೇಕು. ಕೋವಿಡ್‌ನಿಂದ ಬದುಕುಳಿದಿದ್ದೇವೆ ಎಂದರೆ ದೇವರು ನಮಗೆ ಜೀವನದಲ್ಲಿ ಆಸಕ್ತಿಯಿಂದ ಏನಾದರೂ ಮಾಡಬೇಕೆಂದು ಬಯಸಿರಬೇಕು. ತಾನು ಐದನೇ ತರಗತಿಯಲ್ಲಿದ್ದಾಗಲೇ ಅಪ್ಪ ನನ್ನನ್ನು ಸರ್ಜನ್ ಆಗುವ ಕನಸು ಕಂಡಿದ್ದರು. ಮನೆಯಲ್ಲಿ ಮೂಲ ಸೌಲಭ್ಯಗಳೇ ಇಲ್ಲದಿದ್ದರೂ ಆ ಕನಸೇ ತನ್ನನ್ನು ಈ ಸ್ಥಾನಕ್ಕೆ ತಂದಿದೆ ಎಂದು ಜೀವನಾನುಭವ ಹಂಚಿಕೊಂಡರು.
ಪರಿಷತ್‌ನ ಗೌರವ ಮಾರ್ಗದರ್ಶಕ ಎಂ.ಸಿ.ಬಸವರಾಜು ಮಾತನಾಡಿ, ಪ್ರಪಂಚ ಬೆಳೆಯುತ್ತಿರುವುದು ಜ್ಞಾನ ಮತ್ತು ವಿಜ್ಞಾನದಿಂದ. ಉಳಿದಿರುವುದು ಪ್ರೀತಿಯಿಂದ. ಮೌಢ್ಯ ಕೆಸರು, ವಿಚಾರ ಎಳನೀರು. ತಮಗೆ ಎಳನೀರು ಬೇಕೋ ಕೆಸರು ಬೇಕೋ? ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ಕುವೆಂಪು ಅವರ ಒಂದು ಸಾಲನ್ನು ಉಲ್ಲೇಖಿಸಿದ ಅವರು, ಮತದಿಂದ ದೂರಾಗು, ಆಧ್ಯಾತ್ಮಕ್ಕೆ ಶರಣಾಗು, ಮೌಢ್ಯಕ್ಕೆ ಮರೆಯಾಗು, ವಿಜ್ಞಾನಮತಿಯಾಗು ಎಂದು ಹೇಳಿದ್ದರು. ಇಂದು ನಾವೆಲ್ಲರೂ ವಿಜ್ಞಾನಮತಿಗಳಾಗಬೇಕು ಎಂಬುದು ತಮ್ಮ ಕಳಕಳಿಯಾಗಿದೆ ಎಂದು ತಿಳಿಸಿದರು.
ಅಮೆರಿಕಾದಲ್ಲಿ ಪ್ರವಾಸ ಮಾಡುತ್ತಿದ್ದ ಸಂದರ್ಭದಲ್ಲಿ ವಿವೇಕಾನಂದರು ಬುದ್ಧನ ಬಗ್ಗೆ ಬುದ್ಧ ಜಗತ್ತಿನ ನಾಯಕ ಎಂದು ಹೇಳಿದ್ದರು. ಆ ಬುದ್ಧನಂತ ಮಹಾತ್ಮನಿಗೆ ಜನ್ಮ ಕೊಟ್ಟಂತ ನಾಡು ನನ್ನ ಭಾರತ. ಸಂವಿಧಾನದ ವಿಧಿಯೊಂದನ್ನು ಉಲ್ಲೇಖಿಸಿದ ಅವರು, ಪ್ರತಿ ಭಾರತೀಯನೂ ಕೂಡ ವಿಚಾರವಂತನಾಗಿ, ವೈಜ್ಞಾನಿಕ ಮಾರ್ಗದಲ್ಲಿ ಸುಧಾರಣೆಯ ಮೂಲಕ ಮುಂದೆ ಹೋಗಬೇಕು. ಆದರೆ ದುರಾದೃಷ್ಟವಶಾತ್ ಇನ್ನೂ ಅದು ಸಾಧ್ಯವಾಗಿಲ್ಲ. ಅಧಿಕಾರಸ್ಥರು ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿಲ್ಲ. ಆದ್ದರಿಂದ ನಾವೇ ಅದನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪರಿಷತ್ ಜಿಲ್ಲಾಧ್ಯಕ್ಷ ಚಿಕ್ಕರಸಿನಕೆರೆ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಗೌರವ ಮಾರ್ಗದರ್ಶಕಿ ಸುನಂದಾ ಜಯರಾಂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಸಾಮಾಜಿಕ ಪರಿವರ್ತನಾ ಹೋರಾಟಗಾರ ಎಚ್.ಕೆ.ವಿವೇಕಾನಂದ, ಚಿಂತಕಿ ಡಾ.ಜಯದೇವಿ ಗಾಯಕ್ವಾಡ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಪರಿಷತ್‌ನ ಗೌರವಾಧ್ಯಕ್ಷೆ ವಸಂತಮ್ಮ, ಪದಾಧಿಕಾರಿಗಳಾದ ಎಂ.ವಿನಯ್‌ಕುಮಾರ್, ಜಿ.ಎನ್.ಕೆಂಪರಾಜು, ದೇವರಾಜ್ ಕೊಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಗಾಯಕ ಹುರುಗಲವಾಡಿ ರಾಮಯ್ಯ ಮತ್ತು ತಂಡದವರು ವೈಚಾರಿಕ ಗೀತಗಾಯನ ನಡೆಸಿಕೊಟ್ಟರು. ರಾಷ್ಟ್ರಕವಿ ಕುವೆಂಪು ಮತ್ತು ವಿಚಾರವಾದಿ ಎಚ್.ನರಸಿಂಹಯ್ಯ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು. ರಾಸಾಯನಿಕ ಪ್ರಕ್ರಿಯೆ ಮೂಲಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮೊದಲ ಗೋಷ್ಠಿಯಲ್ಲಿ ವೈಜ್ಞಾನಿಕ ಚಿಂತನೆಯಲ್ಲಿ ಮಹಿಳೆಯ ಪಾತ್ರ ಕುರಿತು ಹಾಗೂ ಎರಡನೇ ಗೋಷ್ಠಿಯಲ್ಲಿ ಮೌಢ್ಯಾಚರಣೆ ಮತ್ತು ಸಾಮಾಜಿಕ ದುಷ್ಪರಿಣಾಮಗಳು ಕುರಿತು ವಿಷಯ ಮಂಡಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net