ತೂಕದಲ್ಲಿ ಯಾವುದೇ ವ್ಯತ್ಯಾಸವಾಗಬಾರದು: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಮಂಡ್ಯ ನಗರದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಸಮಿತಿ ಸಭೆ ಆಯೋಜಿಸಲಾಗಿತ್ತು.
ಮಂಡ್ಯ ನಗರದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಸಮಿತಿ ಸಭೆ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ 24 ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅನುಮೋದನೆ
  • ನಗರದಲ್ಲಿ ಜಿಲ್ಲಾಮಟ್ಟದ ಸಮಿತಿ ಸಭೆ

ಮಂಡ್ಯ:

ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳು ನಿಗದಿತ ವೇಳಾಪಟ್ಟಿಯಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಅಂತೆಯೇ ಅರ್ಹ ಫಲಾನುಭವಿಗಳಿಗೆ ತೂಕದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಎಚ್ಚರಿಕೆ ವಹಿಸಿ. ಒಟ್ಟಾರೆ ಪ್ರಕ್ರಿಯೆ ಪಾರದರ್ಶಕವಾಗಿ ಇರಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಹೊಸ ನ್ಯಾಯಬೆಲೆ ಅಂಗಡಿ ತೆರೆಯುವ ಸಂಬಂಧ ಜಿಲ್ಲಾಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನ್ಯಾಯಬೆಲೆ ಅಂಗಡಿಗಳ ಅವಶ್ಯಕತೆ ಇರುವ ಪ್ರದೇಶಗಳನ್ನು ಗುರುತಿಸಿ. ಅಂತೆಯೇ ಸರ್ಕಾರದ ಮಾರ್ಗಸೂಚಿಗಳ ಅನುಸಾರ ಜಿಲ್ಲೆಯಲ್ಲಿ 24 ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯುವ ಕುರಿತು ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಅರ್ಹ ಫಲಾನುಭವಿಗಳಿಗೆ ಪಡಿತರ ವಿತರಣೆ ಸುಗಮವಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಹಾಗೂ ಹೊಸ ನ್ಯಾಯಬೆಲೆ ಅಂಗಡಿಗಳ ಸ್ಥಾಪನೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಪ್ರಕಟಣೆ ಹೊರಡಿಸಿ ಎಂದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯಗಳ ಸಮರ್ಪಕ ದಾಸ್ತಾನು ಕಾಪಾಡಬೇಕು. ಪಡಿತರ ವಿತರಣೆಯಲ್ಲಿ ವಿಳಂಬ ಅಥವಾ ಅಕ್ರಮಗಳಿಗೆ ಅವಕಾಶ ನೀಡದೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಪಡಿತರ ವಿತರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಅವುಗಳನ್ನು ತಕ್ಷಣವೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರದ ಅನ್ನಭಾಗ್ಯ ಸೇರಿದಂತೆ ವಿವಿಧ ಆಹಾರ ಭದ್ರತಾ ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ತಲುಪುವಂತೆ ಸಂಬಂಧಿಸಿದ ಅಧಿಕಾರಿಗಳು ನಿರಂತರ ಮೇಲ್ವಿಚಾರಣೆ ನಡೆಸಬೇಕು ಎಂದು ನಿರ್ದೇಶನ ನೀಡಿದರು.
ಸಾರ್ವಜನಿಕರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ, ತೂಕದಲ್ಲಿ ವ್ಯತ್ಯಾಸ, ಆಹಾರ ಧಾನ್ಯಗಳ ಕೊರತೆ, ಅಂಗಡಿಗಳ ಕಾರ್ಯನಿರ್ವಹಣೆ ಅಥವಾ ಆಹಾರ ಭದ್ರತಾ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ದೂರುಗಳು ಹಾಗೂ ಸಮಸ್ಯೆಗಳಿದ್ದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯವಾಣಿ ಸಂಖ್ಯೆ 1067 ಅನ್ನು ಸಂಪರ್ಕಿಸಿ ದೂರು ದಾಖಲಿಸಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಪಂ ಮುಖ್ಯಯೋಜನಾಧಿಕಾರಿ ಧನುಷ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಪ್ರತೀಕ್ ಹೆಗ್ಡೆ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net