ಡೇಟಾ ಸೆಂಟರ್ ಸ್ಥಾಪನೆಯಿಂದ ಭವಿಷ್ಯದಲ್ಲಿ ಸಂಕಷ್ಟ: ಗಾಂಧೀ ಸಹಜ ಬೇಸಾಯ ಆಶ್ರಮದ ಸಂಚಾಲಕ ಡಾ.ಎಸ್.ಮಂಜುನಾಥ್ ಆತಂಕ

ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಗಾಂಧೀ ಸಹಜ ಬೇಸಾಯ ಆಶ್ರಮದ ಸಂಚಾಲಕ ಡಾ.ಎಸ್.ಮಂಜುನಾಥ್ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಗಾಂಧೀ ಸಹಜ ಬೇಸಾಯ ಆಶ್ರಮದ ಸಂಚಾಲಕ ಡಾ.ಎಸ್.ಮಂಜುನಾಥ್ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮಣ್ಣು-ನೀರು ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಪೂರ್ವಭಾವಿ ಸಭೆ
  • ಜೈ ಕರ್ನಾಟಕ ಪರಿಷತ್ ವತಿಯಿಂದ ಆಯೋಜನೆ

ಮಂಡ್ಯ: ಕೃತಕ ಬುದ್ದಿಮತ್ತೆ(ಎಐ) ಡೇಟಾ ಸೆಂಟರ್‌ಗಳ ಸ್ಥಾಪನೆಯಿಂದಾಗಿ ಭವಿಷ್ಯದಲ್ಲಿ ಭೂಮಿ, ಮಣ್ಣು, ನೀರು ಕಳೆದುಕೊಂಡು ನಿರುದ್ಯೋಗ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಗಾಂಧೀ ಸಹಜ ಬೇಸಾಯ ಆಶ್ರಮದ ಸಂಚಾಲಕ ಡಾ.ಎಸ್.ಮಂಜುನಾಥ್ ಎಚ್ಚರಿಕೆ ನೀಡಿದರು.

ತುಮಕೂರಿನಲ್ಲಿ ಆ.6, 7 ಮತ್ತು 8ರಂದು ನಡೆಯಲಿರುವ ಮುಂದಿನ ಪೀಳಿಗೆಯ ಉಳಿವಿಗಾಗಿ ಮಣ್ಣು-ನೀರು ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ಜೈ ಕರ್ನಾಟಕ ಪರಿಷತ್ ವತಿಯಿಂದ ನಗರದ ಪರಿಷತ್‌ನ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಎಐ ಬಳಕೆ ಹೆಚ್ಚಾದ ಕಾರಣ ಕೆಲ ವರ್ಷಗಳಿಂದ ಹಲವು ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಡೇಟಾ ಸೆಂಟರ್‌ಗಳನ್ನು ಸ್ಥಾಪಿಸಿವೆ. ಈ ಸೆಂಟರ್‌ಗಳು ವಿದ್ಯುತ್ ಮತ್ತು ನೀರನ್ನು ಅಪಾರ ಪ್ರಮಾಣದಲ್ಲಿ ಬಳಕೆ ಮಾಡುತ್ತವೆ. ಜತೆಗೆ ಸುತ್ತಮುತ್ತಲಿನ ಪ್ರದೇಶದ ತಾಪಮಾನದ ಏರಿಕೆಗೂ ಕಾರಣವಾಗುತ್ತವೆ. ಸರ್ವರ್‌ಗಳಿಂದ ಹೊರಬರುವ ಬಿಸಿ ಗಾಳಿಯು ಸ್ಥಳೀಯ ವಾತಾವರಣದ ತಾಪವನ್ನು ಹೆಚ್ಚಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಭೂಮಿ, ಮಣ್ಣು, ನೀರು ಹಾಗೂ ಉದ್ಯೋಗವನ್ನು ಕಳೆದುಕೊಳ್ಳುವ ಭೀತಿಯಿಂದಾಗಿ ಈಗಾಗಲೇ ಹಲವು ರಾಷ್ಟ್ರಗಳು ಎಐ ಡೇಟಾ ಸೆಂಟರ್‌ಗಳ ಸ್ಥಾಪನೆಯನ್ನು ನಿಷೇಧಿಸಿವೆ. ಹಲವು ಕಂಪನಿಗಳು ಭಾರತದಲ್ಲಿ ಸ್ಥಾಪಿಸುವ ಉದ್ದೇಶ ಹೊಂದಿದ್ದು, ಇದರಿಂದಾಗಿಯೇ ಬಿಡದಿ ಸಮೀಪ ಸರ್ಕಾರ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಮುಂದಾಗಿದೆ ಎಂದು ಕಿಡಿಕಾರಿದರು.

ಎಐ ಡೇಟಾ ಸೆಂಟರ್‌ಗಳ ಕಾರ್ಯಾಚರಣೆ ಪ್ರಾರಂಭದ ನಂತರ ಸ್ಥಳೀಯವಾಗಿ ಸೂಕ್ಷ್ಮ ಹವಾಮಾನ ವಲಯಗಳು ಸೇರಿ ಭೂಮಿಯ ಮೇಲ್ಮೈ ತಾಪಮಾನ ಹೆಚ್ಚಳವಾಗುತ್ತದೆ. ಇದರಿಂದಾಗಿ ಅಧಿಕ ಪ್ರಮಾಣದ ನೀರಿನ ಅವಶ್ಯಕತೆ ಇರುತ್ತದೆ. ಎಷ್ಟು ಎಂದರೆ ನಮ್ಮ ಕೆಆರ್‌ಎಸ್ ನಾಲ್ಕು ಪಟ್ಟುಗಿಂತ ಹೆಚ್ಚಾಗಿ ಬೇಕಾಗಿರುತ್ತದೆ. ಅದಕ್ಕೆ ಗಡುಸು ನೀರು ಬೇಡ, ಸಿಹಿಯಾದ ಶುದ್ದ ಕುಡಿಯುವ ನೀರಿನ ಅಗತ್ಯತೆ ಇರುತ್ತದೆ. ವಿದೇಶದಲ್ಲಿ ಸ್ಥಾಪಿಸಿರುವ ಎಐ ಡೇಟಾ ಸೆಂಟರ್‌ಗೆ ನೀರು ಯಾವ ಪ್ರಮಾಣದಲ್ಲಿ ಬೇಕಾಗಿದೆ ಎಂದರೆ, ಮಕ್ಕಳಿಗೆ ಕುಡಿಯುವ ಅಗತ್ಯತೆಗೆ ನೀಡುವ ನೀರನ್ನು ಕಡಿತ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಡೇಟಾ ಸೆಂಟರ್‌ಗೆ ನೀರನ್ನು ಒದಗಿಸುವಂತೆ ಸ್ಥಳೀಯ ಸರ್ಕಾರಗಳು ಆದೇಶ ಹೊರಡಿಸುತ್ತವೆ ಎಂದರೆ ಯಾವ ಪ್ರಮಾಣದಲ್ಲಿ ಇದು ಕಾರ್ಯಾಚರಣೆ ನಡೆಸುತ್ತದೆ ಎಂದು ವಿವರಿಸಿದರು.

ಅಗಾಧ ಪ್ರಮಾಣದ ನೀರು, ಭೂಮಿ, ವಿದ್ಯುತ್ ಎಐ ಡೇಟಾ ಸೆಂಟರ್‌ಗೆ ನೀಡುವುದಾದರೆ ಭವಿಷ್ಯದಲಿ ಯುವಕರ ಉದ್ಯೋಗವನ್ನು ಕಸಿದುಕೊಳ್ಳುವ ಆತಂಕ ಇದೆ. ಭವಿಷ್ಯದಲ್ಲಿ ಭೂಮಿ ಮಾತ್ರ ಆಧುನೀಕತೆಗೆ ಬಂದಂತೆಲ್ಲ ಜಲ ಸಂಪತ್ತನ್ನು ಕಳೆದುಕೊಳ್ಳುತ್ತಿದ್ದೇವೆ. ವಿದೇಶಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕರನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ. ಇಂತಹ ಎಐ ಆಧಾರಿತ ತಂತ್ರಜ್ಞಾನ ನಮಗೆ ಬೇಕಾ ಎಂಬ ಪ್ರಶ್ನೆ ಉದ್ಭವವಾಗಿದೆ. ಭೂಮಿ, ನೀರು, ವಿದ್ಯುತ್ ಕಳೆದುಕೊಳ್ಳುವಂತಹ ಪರಿಸ್ಥಿತಿಯನ್ನು ಮೊದಲ ಹಂತದಲ್ಲಿ ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ನಂತರ ಯಾವ ರೀತಿ ಇದರ ಬಗ್ಗೆ ಹೋರಾಟ ರೂಪಿಸಲು ಚರ್ಚೆ, ಮತ್ತು ದೊಡ್ಡ ಮಟ್ಟದ ಹೋರಾಟ ರೂಪಿಸುವ ಕುರಿತಂತೆ ಯೋಜನೆಗೆ ಸಭೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಪರಿಷತ್ ಅಧ್ಯಕ್ಷ ಎಸ್.ನಾರಾಯಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net