ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪುಟ್ಟವೀರಮ್ಮ ವಿರುದ್ಧ ಮಕ್ಕಳ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪಾಲಕರೊಬ್ಬರಾದ ಸೋಮಶೇಖರ್ ಮಾತನಾಡಿ, ಶಾಲೆ ದಾಖಲಾತಿ ಕೊರತೆಯಿಂದ ಹಲವು ವರ್ಷಗಳ ಹಿಂದೆ ಮುಚ್ಚುವ ಸ್ಥಿತಿಯಲ್ಲಿತ್ತು. ಆದರೇ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿಸಿ ಸರ್ಕಾರಿ ಶಾಲೆಯನ್ನು ಉಳಿಸಿ ಅಭಿವೃದ್ಧಿ ಪಡಿಸಬೇಕೆಂದು ಗ್ರಾಮದ ಯುವಕರು ಕಳೆದ ಹಲವು ವರ್ಷಗಳಿಂದ ಅಮೃತ ಚಾರಿಟಬಲ್ ಟ್ರಸ್ಟ್ ನಿರ್ಮಿಸಿಕೊಂಡು ಶಾಲೆಯ ಎಸ್‌ಡಿಎಂಸಿ ಸಮಿತಿಯ ಜತೆಗೂ 143 ಮಕ್ಕಳನ್ನು ದಾಖಲಾತಿ ಮಾಡಿಸಿದ್ದರು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂದು ಟ್ರಸ್ಟ್ ವತಿಯಿಂದ ಕೊರತೆ ಇರುವ ಶಿಕ್ಷಕರ ನೇಮಾಕಾತಿ ಮಾಡಿ ವೇತನ ಭರಿಸುವುದರ ಜತೆಗೆ ಶಾಲೆಯ ಅಭಿವೃದ್ದಿ ಕೆಲಸಗಳನ್ನು ಮಾಡಲಾಗುತ್ತಿತ್ತು. ಆದರೇ ಇತ್ತೀಚೆಗೆ ಶಾಲೆ ಮುಖ್ಯ ಶಿಕ್ಷಕಿಯಾಗಿ ಬಂದಿದ್ದ ಪುಟ್ಟವೀರಮ್ಮ ಮಕ್ಕಳಿಗೆ ಗುಣಮಟ್ಟವಿಲ್ಲದ ಬಿಸಿಯೂಟ ನೀಡುವುದು ಸೇರಿದಂತೆ ಮಕ್ಕಳ ಮನಸ್ಥಿತಿ ಮೇಲೆ ದುಷ್ಪರಿಣಾಮ ಬೀರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು ಎಂದು ಬೇಸರ ವ್ಯಕ್ತ ಪಡಿಸಿದರು.