ಮಾರಗೌಡನಹಳ್ಳಿ ಗ್ರಾಮದಲ್ಲಿ ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮ
ಬ್ಯಾಂಕ್ ಆಫ್ ಬರೋಡದಿಂದ ಆಯೋಜನೆ
ಮಂಡ್ಯ: ಡಿಜಿಟಲ್ ಬ್ಯಾಂಕಿಂಗ್‌ನಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದೆ. ಆದ್ದರಿಂದ ಜಾಗೃತರಾಗಿ ವ್ಯವಹರಿಸಬೇಕೆಂದು ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಅಧಿಕಾರಿ ವಿಜಿತಾ ಸಲಹೆ ನೀಡಿದರು.
ತಾಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ಬ್ಯಾಂಕ್ ಆಫ್ ಬರೋಡದಿಂದ ಆಯೋಜಿಸಿದ್ದ ಡಿಜಿಟಲ್ ಸಾಕ್ಷರತೆ-ಹಣದ ಸುರಕ್ಷತೆ ಹಾಗೂ ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಎಲ್ಲರೂ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದು, ತ್ವರಿತ ಬ್ಯಾಂಕಿಂಗ್ ಸೌಲಭ್ಯ ಪಡೆಯುತ್ತಿದ್ದಾರೆ. ಡಿಜಿಟಲ್ ಕ್ರಾಂತಿಯಾಗಿದ್ದು, ಎಲ್ಲರೂ ಕ್ಷಣಮಾತ್ರದಲ್ಲಿ ಹಣ ವರ್ಗಾವಣೆ ಮಾಡುವ ಸಾಕ್ಷರತೆ ಹೊಂದಿದ್ದಾರೆ ಎಂದರು.
ಆರ್ಥಿಕ ಸಾಕ್ಷರತಾ ಸಮಾಲೋಚಕಿ ಕೆ.ಪಿ.ಅರುಣಕುಮಾರಿ ಮಾತನಾಡಿ, ಡಿಜಿಟಲ್ ಬ್ಯಾಂಕಿಂಗ್ ಮೂಲಕ ತ್ವರಿತ ಹಣ ವರ್ಗಾವಣೆ ಹಾಗೂ ವ್ಯವಹಾರ ಸುಲಭವಾಗಿದೆ. ಆದರೂ ಸೈಬರ್ ವಂಚನೆಗಳ ಹೆಚ್ಚಾಗಿರುವುದರಿಂದ ಜಾಗೃತರಾಗುವ ಅನಿವಾರ್ಯತೆ ಇದೆ. ಅಪರಿಚಿತರಿಗೆ ಫೋನ್ ಕರೆಗಳಲ್ಲಿ ಒಟಿಪಿ ಸಂಖ್ಯೆ ನೀಡಬೇಡಿ. ಎಟಿಎಂ ಕಾರ್ಡ್ ಮತ್ತು ಪಿನ್ ಸುರಕ್ಷತೆ ವಹಿಸಬೇಕು. ಅನಧಿಕೃತ ಲಿಂಕ್ ತೆರೆಯಬಾರದು. ಆನ್‌ಲೈನ್ ಶಾಪಿಂಗ್ ಮಾಡುವಾಗ ಅಧಿಕೃತ ಆ್ಯಪ್‌ನಲ್ಲಿ ಮಾತ್ರ ವ್ಯವಹರಿಸಬೇಕು. ಸೈಬರ್ ವಂಚನೆಗೆ ಒಳಗಾದಾಗ ತಕ್ಷಣವೇ ಸಹಾಯವಾಣಿ 1930 ಸಂಖ್ಯೆಗೆ ಕರೆ ಮಾಡಬೇಕೆಂದು ಕಿವಿಮಾತು ಹೇಳಿದರು.
ಮತ್ತೋರ್ವ ಅಧಿಕಾರಿ ಪ್ರಶಾಂತ್ ಮಾತನಾಡಿ, ಡಿಜಿಟಲ್ ಅರೆಸ್ಟ್ ಬಗ್ಗೆ ಹೆದರಬೇಡಿ. ಈ ರೀತಿ ಬೆದರಿಕೆ ಹಾಕಿ ವಂಚನೆ ಮಾಡಿರುವ ಪ್ರಕರಣಗಳಿವೆ ಎಂದರು. ಸಂಜೀವಿನಿ ಒಕ್ಕೂಟದ ಮಮತಾ, ಶಶಿಕಲಾ, ಜಯಲಕ್ಷ್ಮೀ, ಮಮತಾ, ರಮ್ಯಾ, ಮಂಜುಳಾ, ಬ್ಯಾಂಕ್‌ಮಿತ್ರ ಕೃಷ್ಣ ಇತರರಿದ್ದರು.