ಕ್ರೀಡೆಯಲ್ಲೂ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಿ

ಭಾರತೀಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವಾಲಿಬಾಲ್ ಪಂದ್ಯ ಸಮಾರೋಪ ಸಮಾರಂಭದಲ್ಲಿ ವಿಜೇತ ಹಾಗೂ ರನ್ನರ್-ಅಪ್ ತಂಡಗಳಿಗೆ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಬಹುಮಾನ ವಿತರಿಸಿದರು. ಎಸ್. ನಾಗರಾಜ್,ಡಾ. ಎಂ.ಎಸ್. ಮಹದೇವಸ್ವಾಮಿ ಇತರಿದ್ದರು.
ಭಾರತೀಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವಾಲಿಬಾಲ್ ಪಂದ್ಯ ಸಮಾರೋಪ ಸಮಾರಂಭದಲ್ಲಿ ವಿಜೇತ ಹಾಗೂ ರನ್ನರ್-ಅಪ್ ತಂಡಗಳಿಗೆ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಬಹುಮಾನ ವಿತರಿಸಿದರು. ಎಸ್. ನಾಗರಾಜ್,ಡಾ. ಎಂ.ಎಸ್. ಮಹದೇವಸ್ವಾಮಿ ಇತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಸಲಹೆ

ಕೆ.ಎಂ.ದೊಡ್ಡಿ:

ವಿದ್ಯಾರ್ಥಿಗಳು ಕೇವಲ ಓದಿನ ಕಡೆಗೆ ಮಾತ್ರ ಗಮನ ಹರಿಸದೆ, ಕ್ರೀಡೆ ಸೇರಿದಂತೆ ಇತರ ಪಠ್ಯೇತರ ಚಟುವಟಿಕೆಗಳಲ್ಲಿಯೂ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಭಾರತೀ ವಿದ್ಯಾ ಸಂಸ್ಥೆಯ ಚೇರ‌್ಮನ್, ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ತಿಳಿಸಿದರು.

ಇಲ್ಲಿನ ಭಾರತೀ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಭಾರತೀ ಎಜುಕೇಷನ್ ಟ್ರಸ್ಟ್‌ನ ಅಂಗ ಸಂಸ್ಥೆಗಳ ವತಿಯಿಂದ ಶನಿವಾರ ಆಯೋಜಿಸಿದ್ದ ಪುರುಷ ವಿದ್ಯಾರ್ಥಿಗಳಿಗಾಗಿ ವಾಲಿಬಾಲ್ ಪಂದ್ಯಾವಳಿ 2026ರ ಸಮಾರೋಪ ಸಮಾರಂಭದಲ್ಲಿ ವಿಜೇತ ಹಾಗೂ ರನ್ನರ್-ಅಪ್ ತಂಡಗಳ ಆಟಗಾರರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣ ಮತ್ತು ಓದಿನ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಶಿಕ್ಷಣವು ಎಷ್ಟು ಮುಖ್ಯವೋ, ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ವಿಕಾಸಕ್ಕೆ ಕ್ರೀಡೆಯೂ ಅಷ್ಟೇ ಮಹತ್ವದ್ದಾಗಿದೆ. ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ ಆರೋಗ್ಯವನ್ನು ಉತ್ತಮಗೊಳಿಸುವುದರ ಜತೆಗೆ ಮಾನಸಿಕ ಉಲ್ಲಾಸ, ಚೈತನ್ಯ, ಆತ್ಮವಿಶ್ವಾಸ ಹಾಗೂ ಸಕಾರಾತ್ಮಕ ಮನೋಭಾವವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಮತ್ತಷ್ಟು ಉತ್ತೇಜಿಸುವ ಉದ್ದೇಶದಿಂದ ಸಂಸ್ಥೆಯ ವತಿಯಿಂದ ಶೀಘ್ರದಲ್ಲೇ ಒಳಾಂಗಣ ಕ್ರೀಡಾಂಗಣವನ್ನು ಪ್ರಾರಂಭಿಸುವ ಯೋಜನೆ ರೂಪಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಬಾಸ್ಕೆಟ್‌ಬಾಲ್, ಬ್ಯಾಡ್ಮಿಂಟನ್ ಹಾಗೂ ಕಬಡ್ಡಿ, ಯೋಗಾ ಹಾಲ್ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಎಸ್. ನಾಗರಾಜ್ ಮಾತನಾಡಿ, ಕ್ರೀಡೆಯಲ್ಲಿ ಸೋಲು ಮತ್ತು ಗೆಲುವು ಎರಡನ್ನೂ ಸಮಾನ ಮನೋಭಾವದಿಂದ ಸ್ವೀಕರಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಗೆಲುವು ಸಾಧಿಸಿದಾಗ ಸಂಯಮದಿಂದಿರಬೇಕು ಹಾಗೂ ಸೋಲು ಎದುರಾದಾಗ ನಿರಾಶರಾಗದೆ, ಮುಂದಿನ ಯಶಸ್ಸಿಗಾಗಿ ಇನ್ನಷ್ಟು ಶ್ರಮಿಸಬೇಕು. ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು, ಸಹಕಾರ ಮನೋಭಾವ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ ಎಂದು ತಿಳಿಸಿದರು.
ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನದ ಅಂಗವಾಗಿ ದೇಶಾದ್ಯಂತ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು. ಭಾರತೀ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎಸ್. ಮಹದೇವಸ್ವಾಮಿ ಮಾತನಾಡಿದರು.
ಭಾರತೀ ಹೆಲ್ತ್ ಸೈನ್ಸ್ ನಿರ್ದೇಶಕ ಡಾ. ತಮಿಳ್‌ಮಣಿ, ಐಕ್ಯೂಎಸಿ. ಸಂಯೋಜಕ ಎಂ.ಪಿ. ಡಾ. ತೇಜೇಶ್‌ಕುಮಾರ್ , ಡಾ. ಚಂದನ್, ಡಾ. ಎಸ್.ಎಲ್. ಸುರೇಶ್, ಭಾರತೀ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಎಸ್. ಶೋಭಾ, ಸಿ. ರಮ್ಯಾ, ಆಡಳಿತಾಧಿಕಾರಿ ಎಸ್. ಜವರೇಗೌಡ, ಜಿ.ಬಿ. ಪಲ್ಲವಿ, ಸಿ.ವಿ. ಮಲ್ಲಿಕಾರ್ಜುನ, ಬಿ.ಕೆ. ಕೃಷ್ಣ, ದೈಹಿಕ ಶಿಕ್ಷಕ ನಾಗರಾಜು ಸೇರಿದಂತೆ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net