ಕಿಕ್ಕೇರಿ: ಕೆರೆಯಲ್ಲಿ ನೀರಿಲ್ಲದೆ ಜನ ಜಾನುವಾರುಗಳು ಬಸವಳಿಯುವಂತಾಗಿದ್ದು, ಕೂಡಲೇ ಕೆರೆ ತುಂಬಿಸಲು ಅಧಿಕಾರಿಗಳು ಕ್ರಮವಹಿಸುವಂತೆ ಆಗ್ರಹಿಸಿ ಗಂಗೇನಹಳ್ಳಿ ಗ್ರಾಮಸ್ಥರು ಬುಧವಾರ ಹೇಮಾವತಿ ನಾಲೆ ಉಪವಿಭಾಗದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಳೆದ ವರ್ಷದಿಂದ ಕೆರೆಯಲ್ಲಿ ನೀರಿಲ್ಲದೆ ಹೈನುಗಾರಿಕೆ ನಂಬಿ ಬದುಕುತ್ತಿರುವ ತಮಗೆ ಬದುಕು ಇಲ್ಲವಾಗಿದೆ. ಸಾಲ ಮಾಡಿಕೊಂಡು ಜಾನುವಾರುಗಳನ್ನು ತಂದಿದ್ದೇವೆ. ಕೆರೆಯಲ್ಲಿ ನೀರಿಲ್ಲದೆ ಬಸವಳಿಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಮುಖಂಡ ಕೃಷ್ಣಯ್ಯ ಮಾತನಾಡಿ, ಗ್ರಾಮದಲ್ಲಿರುವುದು ಕಡು ಬಡತನದ ಸಮುದಾಯ. ಅಲ್ಪಸ್ವಲ್ಪ ಜಮೀನು ಇದೆ. ಬೆಳೆಗೆ ನೀರಿಲ್ಲವಾಗಿದೆ. ಅಲ್ಲಲ್ಲಿ ಗುಂಡಿಗಳಲ್ಲಿದ್ದ ನೀರು ಬರಿದಾಗಿದೆ. ಕೆರೆಯಲ್ಲಿ ನೀರು ಇಲ್ಲವಾಗಿದ್ದು, ಸಾಲ ಮಾಡಿಕೊಂಡು ಭೂಮಿಯಲ್ಲಿ ಬಿತ್ತಿದ ಬೀಜ ಮೊಳಕೆಯೊಡೆಯುವ ಮುನ್ನ ಒಣಗಿ ಹೋಗಿದೆ. ಕೂಡಲೇ ಕೆರೆಗೆ ನೀರು ತುಂಬಿಸಲು ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.
ಮುಖಂಡ ನಂಜುಂಡ ಮಾತನಾಡಿ, ಸಣ್ಣದಾಗಿ ಮಳೆ ಬಂದರೂ ಕೆರೆಗೆ ನೀರು ಬರುವಂತಿತ್ತು. ಕೆರೆಗೆ ಹರಿದು ಬರುತ್ತಿದ್ದ ನೀರಿನ ಜಾಡು ಮುಚ್ಚಿಹೋಗಿದ್ದು, ಇವುಗಳನ್ನು ತೆರವು ಮಾಡಿಸಬೇಕು. ಕೆರೆಯಲ್ಲಿ ನೀರಿದ್ದರೆ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಸಲಿದೆ. ಎಲ್ಲ ಕಡೆ ನಾಲೆ ಮೂಲಕ ನೀರು ತುಂಬಿಸಲಾಗುತ್ತಿದೆ. ಆದರೆ ನಮ್ಮ ಕೆರೆಗೆ ನಾಲೆ ನೀರು ಹರಿಸಲು ಮೀನಮೇಷ ತೋರಿಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಬದುಕು ಕೃಷಿಯಲ್ಲಿ ಅಡಗಿದೆ. ಹೊಟ್ಟೆಯ ಮೇಲೆ ಅಧಿಕಾರಿಗಳು ಬರೆ ಹಾಕಬೇಡಿ. ಕನಿಷ್ಠ ಮೇವಿನ ಬೆಳೆ ಬೆಳೆಯಲಾದರೂ ಕೆರೆಗೆ ನೀರನ್ನು ತುಂಬಿಸುವ ವ್ಯವಸ್ಥೆ ಮಾಡಿ. ಇಲ್ಲವಾದರೆ ಬದುಕು ಕಟ್ಟಿಕೊಳ್ಳಲು ಗುಳೆ ಹೋಗುವ ಸ್ಥಿತಿಗೆೆ ಅಧಿಕಾರಿಗಳೇ ಕಾರಣರಾಗಬೇಕಾದೀತು. ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳು ತೆಗೆಯುವ ಕೆಲಸವನ್ನು ಕಾರ್ಮಿಕರು ಮಾಡುತ್ತಿದ್ದಾರೆ. ಇದರ ಕುಂಟು ನೆಪದಲ್ಲಿ ಕೆರೆಗೆ ನೀರು ಹರಿಸುತ್ತಿಲ್ಲ ಎಂಬ ಮಾಹಿತಿ ಇದೆ. ಕಾರ್ಮಿಕರಿಗೆ ಈ ಕೆಲಸದ ಪರ್ಯಾಯವಾಗಿ ಕೆರೆಯ ದಂಡೆಯ ಜಂಗಲ್ ತೆಗೆಯುವ ಕೆಲಸ ನೀಡಿ ಮೊದಲು ಕೆರೆಗೆ ನೀತು ತುಂಬಿಸುವಂತೆ ಒತ್ತಾಯಿಸಿದರು.
ಕಚೇರಿಯಲ್ಲಿದ್ದ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿ, ಕೂಡಲೇ ಕೆರೆಗೆ ನೀರು ಹರಿಸದೆ ವಿಳಂಬ ಮಾಡಿದರೆ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.