ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಮಳವಳ್ಳಿ ತಾಲೂಕಿನ ಟಿ.ಕಾಗೇಪುರ ಗ್ರಾಮದಲ್ಲಿರುವ ಕಾವೇರಿ ನೀರಾವರಿ ನಿಗಮ ಕಚೇರಿ ಮುಂದೆ ಶುಕ್ರವಾರ ರೈತರು ಪ್ರತಿಭಟನೆ ನಡೆಸಿದರು. ಭರತ್ ರಾಜ್, ದೇವಿ, ರಾಮಲಿಂಗೇಗೌಡ, ಬಸವರಾಜು, ಆನಂದ ಇತರರು ಇದ್ದರು.
ಮಳವಳ್ಳಿ: ನಾಲೆಗಳಿಗೆ ನೀರು ಬಿಡ ಬೇಕೆಂದು ಒತ್ತಾಯಿಸಿ ತಾಲೂಕಿನ ಟಿ.ಕಾಗೇಪುರ ಬಳಿ ಇರುವ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ಶುಕ್ರವಾರ ರೈತರು ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್ ರಾಜ್ ಮಾತನಾಡಿ, ಮಂಡ್ಯ ಜಿಲ್ಲೆಯ ಮೂವರು ಮಂತ್ರಿಗಳಿಂದ ಇಲ್ಲಿನ ಜನರಿಗೆ ಯಾವುದೇ ಪ್ರಯೋಜನವಿಲ್ಲ. ರೈತರ ಬೆಳೆಗಳಿಗೆ ನೀರು ಕೊಡಿಸುವ ಜವಾಬ್ದಾರಿ ಇಲ್ಲದೆ ಬೇಜಾವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ. ರೈತರು ಯಾವುದೇ ಬೆಳೆಗಳ ಬೆಳೆಯಬಾರದು ಎಂದು ತಿಳಿಸುವವರು ಪರಿಹಾರ ಕೊಡಿಸಲು ಯೋಗ್ಯತೆ ಇಲ್ಲವೇ?. ರೈತರ ಸಾಲ ಮನ್ನಾ ಮಾಡಲು ಕ್ರಮವಹಿಸದ ಮಂತ್ರಿಗಳು, ಮಂಡ್ಯ ಜಿಲ್ಲೆಗೆ ಸಿಭಿಸಿದ್ದರೂ ಪ್ರಯೋಜನ ಏನು ಎಂದು ಕಿಡಿಕಾರಿದರು.
ತಾಲೂಕಿನ ಕೊನೆ ಭಾಗದ ರೈತರಿಗೆ ವಿಸಿ ನಾಲೆಯಿಂದ ನೀರು ಬಿಡದೆ ಕಬ್ಬು, ರೇಷ್ಮೆ, ಜೋಳ, ಸೀಮೆಹುಲ್ಲು, ತೆಂಗು ಇತರ ಬೆಳೆಗಳು ಒಣಗುತ್ತಿವೆ. ಅಲ್ಲದೆ ಮುಂಗಾರಿನಲ್ಲಿ ಭತ್ತ ನಾಟಿ ಮಾಡಲು ಸಾಧ್ಯವಾಗದಿರುವ ಜಮೀನುಗಳಿಗೆ ಎಕರೆಗೆ 50 ಸಾವಿರ ರೂ. ಪರಿಹಾರ ಕೊಡಿಸಲು ಕ್ರಮ ಜರುಗಿಸುತ್ತಿಲ್ಲ. ಮಳವಳ್ಳಿ ತಾಲೂಕು ಯಾವಾಗಲೂ ಕೊನೆ ಭಾಗದಲ್ಲಿ ನೀರಿಗಾಗಿ ಹಪಾಪಿಸುವಂತಹ ಸಂದರ್ಭ ನಿರ್ಮಾಣವಾಗಿದೆ. ಬೆಳೆಗಳ ಬದಲಾಗಿ ಕೆರೆಕಟ್ಟೆಗಳಿಗೆ ನೀರು ಕೊಡುತ್ತೇವೆ ಎಂದು ಹೇಳುವವರು ಪುರಿಗಾಲಿ ಹನಿ ನೀರಾವರಿ, ಮುಡುಕುತೊರೆ ಹಾಗೂ ನಂಜಾಪುರ ಏತ ನೀರಾವರಿ ಮೂಲಕ ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಅವಕಾಶವಿದ್ದರೂ ಅದನ್ನು ಮಾಡದೆ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನಾನಿರತರ ಅಹವಾಲು ಸ್ವೀಕರಿಸಿದ ನಿಗಮದ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಾಬುಕೃಷ್ಣ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರ ಭರತೇಶ್ ಕುಮಾರ್, ನಿಮ್ಮ ಬೇಡಿಕೆ ಅನುಗುಣವಾಗಿ ನೀರು ನಿರ್ವಹಣಾ ಸಮಿತಿಗೆ ಕೂಡಲೇ ಪತ್ರವನ್ನು ಬರೆದು ನೀರನ್ನು ನೀಡಬೇಕೆಂದು ಮನವಿ ಸಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ರಾಮಲಿಂಗೇಗೌಡ, ಬಸವರಾಜು, ಆನಂದ ಪ್ರಸನ್ನ, ಗೀರಿಶ, ಮಲ್ಲೇಶ, ಹನುಮಂತು, ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ರತ್ನಮ್ಮ, ಸವಿತಾ, ಬೃಂದಾ, ನಾರಾಯಣಸ್ವಾಮಿ, ಕಾಳಪ್ಪ, ವೆಂಕಟಚಲಯ್ಯ ಇತರರು ಇದ್ದರು.