ನಿರ್ದಿಷ್ಟ ವೇತಾನುದಾನ ನಿಗದಿಗೆ ಒತ್ತಾಯ: ನಿಗಮದ ಹೊರಗುತ್ತಿಗೆ ಆಧಾರಿತ ಸವಡೆಗಳಿಂದ ಮನವಿ

ಮಂಡ್ಯದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಹೊರಗುತ್ತಿಗೆ ಆಧಾರಿತ ಸವಡೆಗಳ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಮಂಡ್ಯದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಹೊರಗುತ್ತಿಗೆ ಆಧಾರಿತ ಸವಡೆಗಳ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕಳೆದ ಐದು ತಿಂಗಳಿನಿಂದ ವೇತನ ನೀಡಿಲ್ಲವೆಂದು ಬೇಸರ
  • ಶಾಶ್ವತ ಪರಿಹಾರ ರೂಪಿಸುವುದಾಗಿ ಸಚಿವ ಸಿಆರ್‌ಎಸ್ ಭರವಸೆ

ಮಂಡ್ಯ:

ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ನಾಲೆಗಳ ನಿರ್ವಹಣೆ ನಡೆಸುವ ಸವಡೆಗಳಿಗೆ ನಿರ್ದಿಷ್ಟ ವೇತಾನುದಾನ ನಿಗದಿಪಡಿಸುವಂತೆ ಒತ್ತಾಯಿಸಿ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ನಗರದಲ್ಲಿ ಮನವಿ ಸಲ್ಲಿಸಲಾಯಿತು.

ಪ್ರವಾಸಿಮಂದಿರದಲ್ಲಿ ಸಚಿವರನ್ನು ಭೇಟಿ ಮಾಡಿದ ನಿಗಮದ ಹೊರಗುತ್ತಿಗೆ ಆಧಾರಿತ ಸವಡೆಗಳ ಸಂಘದ ಪದಾಧಿಕಾರಿಗಳು, ಕೃಷಿ ಬೆಳವಣಿಗೆಯಲ್ಲಿ ಸವಡೆಗಳ ಪಾತ್ರ ಮಹತ್ವದಾಗಿದೆ. ನಾಲೆಗಳ ನಿರ್ವಹಣೆ, ಗಿಡಗೆಂಟೆ ತೆರವು ಸೇರಿದಂತೆ ಹಲವು ರೀತಿಯಲ್ಲಿ ನೀರು ನಿರ್ವಹಣೆ ಮಾಡುವ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ಲಭ್ಯವಾಗುವುದಿಲ್ಲ. ಇದಲ್ಲದೆ ಕರ್ತವ್ಯದ ವೇಳೆಯಲ್ಲಿ ಹಾವು, ಚೇಳು ಕಡಿತದಿಂದ ಸಾವನ್ನಪ್ಪಿದರೂ ಯಾವುದೇ ಪರಿಹಾರವಿಲ್ಲದೆ ಸವಡೆಗಳ ಕುಟುಂಬ ಬೀದಿಗೆ ಬೀಳುತ್ತಿದೆ. ನಿವೃತ್ತಿ ನಂತರ ಯಾವುದೆ ಆರ್ಥಿಕ ಸಹಾಯ ಲಭ್ಯವಾಗದೆ ಬದುಕು ಹೀನಾಯವಾಗಿದೆ ಎಂದು ವಿವರಿಸಿದರು.
ಮಂಡ್ಯ ವೃತ್ತ ವ್ಯಾಪ್ತಿಯಲ್ಲಿ 650 ಸವಡೆಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ ಐದು ತಿಂಗಳಿನಿಂದ ವೇತನ ನೀಡಿಲ್ಲ. ನೀರು ನಿರ್ವಹಣಾ ನೌಕರರ ವೇತನಕ್ಕಾಗಿ ಪ್ರತ್ಯೇಕ ಅನುದಾನ ನಿಗದಿಪಡಿಸದೆ ನಿರ್ವಹಣೆ ಹೆಸರಲ್ಲಿ ವೇತನ ನೀಡಲಾಗುತ್ತಿದೆ. ಇದರಿಂದ ಬಹುತೇಕ ಹಣ ಸಿವಿಲ್ ಕಾಮಗಾರಿಗಳಿಗೆ ಬಳಕೆಯಾಗಿ ಕಡೆಗೆ ಸವಡೆಗಳಿಗೆ ಯಾವುದೆ ವೇತನ ನೀಡಲು ಹಣ ಲಭ್ಯವಿಲ್ಲದೆ ಸವಡೆಗಳು ಸಾಲದ ಸುಳಿಗೆ ಸಿಲುಕುವಂತಾಗಿದೆ. ಇದನ್ನು ತಪ್ಪಿಸಲು ಸವಡೆಗಳ ವೇತನಕ್ಕಾಗಿ ಪ್ರತ್ಯೇಕ ಅನುದಾನ ನಿಗದಿಪಡಿಸಬೇಕಿದೆ. ರಾಜ್ಯದ ನಾಲ್ಕು ನಿಗಮಗಳ ನೀರು ನಿರ್ವಹಣಾ ನೌಕರರ ಪರಿಸ್ಥಿತಿ ಇದೇ ರೀತಿಯಲ್ಲಿ ಇದ್ದು, ಈ ಸಂಬಂದ ಉನ್ನತಮಟ್ಟದ ಸಭೆ ಆಯೋಜಿಸಿ ಅಗತ್ಯ ಪರಿಹಾರ ಕ್ರಮಗಳನ್ನು ರೂಪಿಸುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಸಚಿವ ಎನ್.ಚಲುವರಾಯಸ್ವಾಮಿ, ಈ ಸಂಬಂಧ ಶಾಶ್ವತ ಪರಿಹಾರ ರೂಪಿಸಲು ಅಧಿಕಾರಿಗಳ ಸಭೆ ಆಯೋಜಿಸುವುದಾಗಿ ಭರವಸೆ ನೀಡಿದರು. ಅಂತೆಯೇ, ಸ್ಥಳದಲ್ಲಿದ್ದ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಬಾಕಿ ಇರುವ ಐದು ತಿಂಗಳ ವೇತನದಲ್ಲಿ ಒಂದು ತಿಂಗಳ ವೇತನ ಬಿಡುಗಡೆಗೊಳಿಸಲು ಕ್ರಮವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಮಂಡ್ಯ ವಿಭಾಗದ ಅಧ್ಯಕ್ಷ ಶಿವಲಿಂಗಯ್ಯ, ಮಹೇಶ್, ರವಿ, ರಾಮೇಗೌಡ, ವೆಂಕಟರಾಜು, ವೈರಮುಡಿ, ರಾಜ್ಯ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net