ಕೆ.ಎಂ.ದೊಡ್ಡಿ: ಸರ್ಕಾರ ನಿಗದಿಪಡಿಸಿರುವ ಕಬ್ಬು ಸಾಗಣೆ ದರ ಹೆಚ್ಚಳ ಮಾಡುವಂತೆ ಆಗ್ರಹಿಸಿ ಚಾಂಶುಗರ್ ಕಾರ್ಖಾನೆ ವ್ಯಾಪ್ತಿಯ ಲಾರಿ ಮತ್ತು ಟ್ರ್ಯಾಕ್ಟರ್ ಮಾಲೀಕರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕಾರ್ಖಾನೆ ಎದುರು ಧರಣಿ ನಡೆಸಿದ ಪ್ರತಿಭಟನಾಕಾರರು, ದಿನೇ ದಿನೆ ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೂ ಕಾರ್ಖಾನೆ ಆಡಳಿತ ಮಂಡಳಿ ಕಬ್ಬು ಸಾಗಣೆ ಮಾಡುವ ಲಾರಿ, ಟ್ರ್ಯಾಕ್ಟರ್‌ಗಳಿಗೆ ಈ ಹಿಂದಿನ ದರವನ್ನು ನೀಡುತ್ತಿವೆ. 2022ರ ಜುಲೈನಲ್ಲಿ ದಕ್ಷಿಣ ಕರ್ನಾಟಕ ಕಬ್ಬು ಸಾಗಣೆ ಲಾರಿ ಮಾಲೀಕರ ಸಂಘಗಳ ಒಕ್ಕೂಟ ದರ ಪರಿಷ್ಕರಣೆಗಾಗಿ ಮನವಿ ಸಲ್ಲಿಸಿತ್ತು. ಈ ಬಗ್ಗೆ ದಕ್ಷಿಣ ಭಾಗದ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚದ ಮಾರ್ಗಸೂಚಿಗಳನ್ನು ಹೊರಡಿಸಿ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿದ್ದರು. ಆದರೂ ಆಡಳಿತ ಮಂಡಳಿಗಳು ಕ್ರಮಕೈಗೊಂಡಿಲ್ಲ ಎಂದು ಕಿಡಿಕಾರಿದರು.
ದಕ್ಷಿಣ ಕರ್ನಾಟಕದ ಕಾರ್ಖಾನೆಗಳು ಜೂನ್‌ನಲ್ಲೇ ಪ್ರಾರಂಭವಾಗುತ್ತಿವೆ. ಪ್ರತಿ ವರ್ಷ ಕಾರ್ಖಾನೆ ಪ್ರಾರಂಭಕ್ಕೆ ಮುನ್ನವೇ ದರ ನಿಗದಿಪಡಿಸಬೇಕಿದೆ. ಸಾಗಣೆ ವೆಚ್ಚ ಮತ್ತು ಕಟಾವು ದರ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿದ್ದರೂ ಹೆಚ್ಚಳ ಮಾಡದಿರುವುದು ಖಂಡನೀಯ. 2021-22ನೇ ಸಾಲಿನಲ್ಲಿ ಹೊರಡಿಸಿರುವ ಕಬ್ಬು ಕಟಾವು, ಸಾಗಣೆ ವೆಚ್ಚದ ಮಾರ್ಗಸೂಚಿಗಳನ್ನು ಚಾಂಶುಗರ್ ಕಾರ್ಖಾನೆ ಜಾರಿಗೊಳಿಸಿ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.
ಚಾಂಶುಗರ್ ಕಾರ್ಖಾನೆ ವ್ಯಾಪ್ತಿಯ ಲಾರಿ ಮತ್ತು ಟ್ರ್ಯಾಕ್ಟರ್ ಮಾಲೀಕರ ಸಂಘದ ಅಧ್ಯಕ್ಷ ಅಕ್ಕೂರು ನಿಂಗೇಗೌಡ, ಉಪಾಧ್ಯಕ್ಷ ಅಣ್ಣೂರು ಶಿವಕುಮಾರ್, ಕಾರ್ಯದರ್ಶಿ ಕೆಂಪಯ್ಯ, ಸಹ ಕಾರ್ಯದರ್ಶಿ ಶಿವಣ್ಣ, ನಿರ್ದೇಶಕರಾದ ಶರತ್, ಸಂದೀಪ್, ಶಿವರಾಮು, ಮಹೇಶ್, ಆನಂದ್, ಶಿವರಾಮು, ರಮೇಶ್ ಇತರರಿದ್ದರು.