ಮಂಡ್ಯ: ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿಷಕಾರಿ ಹಾವುಗಳು. ಅವರನ್ನು ಕೊಲ್ಲಬೇಕೆಂದು ಕೋಮು ಹಿಂಸೆ ಹರಡಲು ಕರೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸ್ಸಾಂ ಚುನಾವಣಾ ಪ್ರಚಾರ ಭಾಷಣ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿದ ಬಿಜೆಪಿ ಕಾರ್ಯಕರ್ತರ ನಿಯೋಗ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ ಅವರ ಮೂಲಕ ಪೊಲೀಸ್ ಕಮಿಷನರ್‌ಗೆ ಮನವಿ ರವಾನಿಸಿದರು. ದೇಶದಲ್ಲಿ ದ್ವೇಷ ಭಾಷಣ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ದ್ವೇಷ ಭಾಷಣದಲ್ಲಿಯೇ ತೊಡಗಿದೆ. ಇವರಿಗೆ ಕಡಿವಾಣ ಹಾಕಲು ಕಾನೂನು ಬಿಗಿಗೊಳಿಸುವ ಅವಶ್ಯಕತೆ ಇದೆ. ಹಾಗಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾನೂನಿನಡಿ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಕರ್ನಾಟಕದಲ್ಲಿಯೂ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧವಾಗಿ ದ್ವೇಷ ಭಾಷಣದಲ್ಲಿ ತೊಡಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಪ್ರಿಯಾಂಕ್ ಖರ್ಗೆ ಮೇಲೆ ಕ್ರಮ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಶಾಂತಿ ನೆಲೆಸಲು ಇವರಿಗೆ ಇಷ್ಟವಿಲ್ಲದಾಗಿದೆ. ಜತೆಗೆ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಮುಗಿಸುವ ಹುನ್ನಾರದಿಂದಲೇ ಇಂತಹ ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಎಲ್ಲಿಯಾದರೂ ಗಲಾಟೆಯಾದರೆ ಅದಕ್ಕೆ ನೇರ ಹೊಣೆ ಅವರೇ ಆಗಿರುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರ ಪ್ರಾಣಕ್ಕೆ ಅಪಾಯವಿದೆ. ಇಂತಹ ಸಲ್ಲದ ಹೇಳಿಕೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು. ಪೊಲೀಸರು ದೂರು ನೀಡುವುದನ್ನು ಕಾಯದೇ ಸ್ವಯಂ ಪ್ರೇರಿತ ದೂರು ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಕಾರ್ಯಕರ್ತರಾದ ಶಿವಕುಮಾರ ಆರಾಧ್ಯ, ಮಹಾಂತಪ್ಪ, ಚನ್ನೇಗೌಡ, ಶಶಿಕುಮಾರ್, ನಿತ್ಯಾನಂದ, ಹೊಸಹಳ್ಳಿ ಶಿವು, ಬಿ.ಕೃಷ್ಣ ಇದ್ದರು.