ರೈತರಿಗೆ ಸರಿಯಾದ ಮಾಹಿತಿ ಮತ್ತು ಅರಿವು ಮೂಡಿಸುವುದು ಅತ್ಯಗತ್ಯ
ನಗರದಲ್ಲಿ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ
ಮಂಡ್ಯ:ಈ ವರ್ಷ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಆದ್ದರಿಂದ ರೈತರಿಗೆ ಸರಿಯಾದ ಮಾಹಿತಿ ಮತ್ತು ಅರಿವು ಮೂಡಿಸುವುದು ಅತ್ಯಗತ್ಯ. ಮಾತ್ರವಲ್ಲದೆ ಮುಂಗಾರು ಮಳೆಯ ಕೊರತೆಯಿಂದ ರೈತರಿಗೆ ಆರ್ಥಿಕ ನಷ್ಟವಾಗುವುದನ್ನು ತಡೆಗಟ್ಟಲು ಪರ್ಯಾಯ ಬೆಳೆಗಳನ್ನು ಬೆಳೆಯುವ ಬಗ್ಗೆ ಅರಿವು ಮೂಡಿಸಿ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ ಹಾಗೂ ಪರ್ಯಾಯ ಬೆಳೆ ಬೆಳೆಯುವ ಸಂಬಂಧ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು ಬಿತ್ತನೆ ಗುರಿಯ ಪೈಕಿ ಕೇವಲ ಶೇ.5ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಮಳೆಯ ಕೊರತೆಯಿಂದಾಗಿ ಬಿತ್ತನೆ ಕಾರ್ಯವು ನಿಧಾನಗತಿಯಲ್ಲಿದೆ. ಸರಾಸರಿ ಮಳೆಯಲ್ಲಿ ಸುಮಾರು ಶೇ.35ರಷ್ಟು ಕೊರತೆ ಉಂಟಾಗಿದೆ ಎಂದು ತಿಳಿಸಿದರು.
ಮುಂಗಾರು ಮಳೆ ವಿಳಂಬವಾದಾಗ ರೈತರು ಹೆಚ್ಚು ನೀರು ಬೇಡದ ಹಾಗೂ ಅಲ್ಪಾವಧಿಯಲ್ಲಿ ಬೆಳೆಯುವ ಭತ್ತದ ತಳಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಅಂತೆಯೇ ಭತ್ತದ ಪರ್ಯಾಯವಾಗಿ ರಾಗಿ, ನವಣೆ, ಮುಸುಗಿನ ಜೋಳ, ಅರ್ಕ, ಹುರುಳಿ, ಅಲಸಂದೆ, ಸೂರ್ಯಕಾಂತಿಯನ್ನು ಬೆಳೆಯಲು ಕೃಷಿ ಇಲಾಖೆಯಿಂದ ರೈತರಿಗೆ ಅರಿವು ಮೂಡಿಸಿ ಎಂದು ಸಲಹೆ ನೀಡಿದರು.
ಕಡಿಮೆ ಮಳೆ ಅಥವಾ ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ರೈತರಿಗೆ ನಷ್ಟವಾಗದಂತೆ ತಡೆಯಲು, ಪರ್ಯಾಯ ಬೆಳೆ ಯೋಜನೆಯನ್ನು ಸಿದ್ಧಪಡಿಸಿ ಒಂದು ವಾರದಲ್ಲಿ ವರದಿ ನೀಡುವಂತೆ ಕೃಷಿ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ, ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ರೈತರು ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಬೆಳೆಯ ತಳಿಗಳನ್ನು ಆಯ್ಕೆ ಮಾಡಿ, ಪರ್ಯಾಯ ಬೆಳೆ ಹಾಗೂ ಪರ್ಯಾಯ ಬೇಸಾಯ ಕ್ರಮ ಅನುಸರಿಸಬೇಕು. ಈ ಸಂಬಂಧ ಅವರಿಗೆ ಅಗತ್ಯ ಮಾಹಿತಿ ಕೊಡಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಹೋಬಳಿಗೊಬ್ಬರು ನೋಡೆಲ್ ವಿಜ್ಞಾನಿಯೆಂದು ನಿಯೋಜನೆ ಮಾಡಬೇಕು. ಅವರ ಮೂಲಕ ಪರ್ಯಾಯ ಬೆಳೆಗಳನ್ನು ಬೆಳೆಯುವ ಬಗ್ಗೆ ಅರಿವು ಮೂಡಿಸಲು ಕ್ರಮ ವಹಿಸುವಂತೆ ಹಾಗೂ ರೈತರೊಂದಿಗೆ ಸಭೆ ನಡೆಸಿ ಜಾಗೃತಿ ಮೂಡಿಸಿ. ಜಿಲ್ಲೆಯಲ್ಲಿ ಯಾವುದೇ ರೀತಿಯ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಕೊರತೆ ಇಲ್ಲ. ಅಗತ್ಯ ತಕ್ಕಂತೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ದಾಸ್ತಾನು ಇದೆ. ಮಳೆ ಕಡಿಮೆಯಾದಲ್ಲಿ ಆತಂಕ ಪಡದೆ ಯಾವ ಬೆಳೆಗಳನ್ನು ಬೆಳೆಯಬೇಕು ಎಂಬ ಬಗ್ಗೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಅಧಿಕಾರಿಗಳು ವ್ಯಾಪಕ ಜಾಗೃತಿ ಮೂಡಿಸಬೇಕು. ತಾಲೂಕು ಮಟ್ಟದಲ್ಲಿ ರೈತರೊಂದಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಸಭೆ ಮಾಡಿ ಚರ್ಚಿಸಬೇಕೆಂದು ಎಂದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಎಸ್.ಜಯಸ್ವಾಮಿ, ಮಂಡ್ಯ ಕೃಷಿ ವಿವಿ ವಿಜ್ಞಾನಿ ಡಾ.ದಿನೇಶ್, ಉಪ ನಿರ್ದೇಶಕಿಯರಾದ ಮಾಲತಿ, ಸುಷ್ಮಾ, ವಿಷಯ ತಜ್ಞ ಶ್ರೀಹರ್ಷ, ಸಹಾಯಕ ನಿರ್ದೇಶಕರಾದ ಸುನೀತಾ, ಪ್ರತಿಭಾ, ಸಂದೀಪ್, ಪ್ರಿಯದರ್ಶಿನಿ, ಮಂಜುನಾಥ್, ದೀಪಕ್, ಹರೀಶ್ ಇತರರಿದ್ದರು.