ವಂಚನೆ ಸರಿಪಡಿಸಿ ಅಭಿವೃದ್ಧಿಗೆ ಸ್ಪಂದಿಸಲಿ: ದಸಂಸ ಅಧ್ಯಕ್ಷ ವೆಂಕಟಗಿರಿಯಯ್ಯ ಒತ್ತಾಯ

ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಧನಾ ಸಮಾವೇಶ ಸಂಘಟಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಿಲುವು ಸರಿಯಿಲ್ಲ
  • ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್‌ ಮೂಲಕ ಅಭಿವೃದ್ಧಿ ಪೂರಕವಾಗಿ ಸ್ಪಂದಿಸಲಿ
ಮಂಡ್ಯ: ದಲಿತ ಸಮುದಾಯಕ್ಕಾಗಿರುವ ವಂಚನೆ ಸರಿಪಡಿಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ ರಾಜ್ಯದ ಅಭಿವೃದ್ಧಿ ಪೂರಕವಾಗಿ ಸ್ಪಂದಿಸಲು ಮುಂದಾಗಬೇಕು ಎಂದು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ವೆಂಕಟಗಿರಿಯಯ್ಯ ಒತ್ತಾಯಿಸಿದರು.
2025-26ನೇ ಸಾಲಿನ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ 42 ಸಾವಿರ ಕೋಟಿ ರೂ. ಅನುದಾನದಲ್ಲಿ 30 ಸಾವಿರ ಕೋಟಿ ರೂ. ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. ದಲಿತರನ್ನು ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಅನುದಾನದಿಂದ ವಂಚಿಸಿ ಸಾಧನಾ ಸಮಾವೇಶ ಸಂಘಟಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವು ಸರಿಯಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಮುದಾಯದ ಹಣ ದುರ್ಬಳಕೆಯನ್ನೇ 1000 ದಿನಗಳ ಸಾಧನೆ ಎಂದುಕೊಂಡು ಸಮಾವೇಶ ನಡೆಸುತ್ತಿರುವುದು ನೈತಿಕ ಪ್ರಜಾಪ್ರಭುತ್ವದ ಅಧಃಪತನವಾಗಿದೆ. ಆದ್ದರಿಂದ ಪ್ರಸಕ್ತ ಬಜೆಟ್‌ನಲ್ಲಿ ತೆಲಂಗಾಣದ ಮಾದರಿ ರಾಜ್ಯದ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ. ವಿಶೇಷ ಅನುದಾನ ಘೋಷಣೆ ಮಾಡಬೇಕು. ಬಜೆಟ್‌ನಲ್ಲಿ ಗ್ಯಾರಂಟಿಗೆಂದು 56 ಸಾವಿರ ಕೋಟಿ ರೂ. ಅನುದಾನ ಘೋಷಿಸಿದ್ದರೂ ಪರಿಶಿಷ್ಟರಿಗೆ ಮೀಸಲಿರಿಸಿದ ಅನುದಾನ ವರ್ಗಾಯಿಸಿದ್ದೇಕೆ ಎಂಬುದಕ್ಕೆ ಉತ್ತರಿಸಬೇಕು. 2013ರಲಿ ಎಸ್ಸಿಎಸ್ಪಿ ಟಿಎಸ್ಪಿ ಅನುದಾನದ 2 ಲಕ್ಷ ಕೋಟಿ ರೂ. ಅನ್ಯ ಯೋಜನೆಗಳಿಗೆ ಬಳಸಲಾಗಿದೆ. ಆದ್ದರಿಂದ ಪ್ರಸಕ್ತ ಬಜೆಟ್‌ನಲ್ಲಿ 25 ಲಕ್ಷ ರೂ. ಪ್ರತಿ ಕುಟುಂಬಕ್ಕೆ ಮೀಸಲಿಡಬೇಕು. ಮರ್ಯಾದೆ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಬೇಕು. ತಮಿಳುನಾಡು ಸರ್ಕಾರದಂತೆ ಶೇ.75ರಷ್ಟು ಮೀಸಲಾತಿ ನೀತಿ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಬಿ.ಆನಂದ್, ಸಂಘಟನಾ ಸಂಚಾಲಕ ಸುರೇಶ್‌ಕುಮಾರ್, ಜಿಲಾಧ್ಯಕ್ಷೆ ಜಿ.ಸುಶ್ಮಿತಾ, ತಾಲೂಕು ಅಧ್ಯಕ್ಷರಾದ ಬಿ.ಎಸ್.ಗೀತಾ, ಪುಟ್ಟಲಿಂಗಯ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net