ಪರಿಶಿಷ್ಟ ಜಾತಿ ಮತ್ತು ಪಂಗಡದ ಹಣ ದುರ್ಬಳಕೆ ಆಗದಂತೆಯಾಗಬಾರದು
ಶೇ.24.1ರಷ್ಟು ಅನುದಾನ ಮೀಸಲಿಡಲಿಡಬೇಕು
ಮಂಡ್ಯ:ಪರಿಶಿಷ್ಟ ಜಾತಿ ಮತ್ತು ಪಂಗಡದ ಹಣ ದುರ್ಬಳಕೆ ಆಗದಂತೆ ತಡೆಯುವುದು ಹಾಗೂ ಶೇ.24.1ರಷ್ಟು ಅನುದಾನ ಮೀಸಲಿಡಲು ಸರ್ಕಾರಕ್ಕೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ಕಾರ್ಯಕರ್ತರು, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. 2026-27ರ ಬಜೆಟ್‌ನಲ್ಲಿ ಅನುದಾನವನ್ನು ಪರಿಶಿಷ್ಟ ಜಾತಿ, ಪಂಗಡಗಳ ಜನಸಂಖ್ಯೆಗನುಗುಣವಾಗಿ ಮೀಸಲಿಡಬೇಕು. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ ಸಕ್ಷನ್ 7(ಸಿ) ಅನ್ನು ರದ್ದುಪಡಿಸಬೇಕು. ನಗರದ ಮತ್ತು ಗ್ರಾಮೀಣ ಪ್ರದೇಶದಲ್ಲಿನ ನಿವೇಶನರಹಿತ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಸರ್ಕಾರ ಖರೀದಿಸುವ ಜಮೀನು ದರ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.
ಖಾಸಗಿ ಜಮೀನು ಬೆಲೆ ಅತಿ ಹೆಚ್ಚಳವಾಗಿದ್ದು, ವಸತಿ ಇಲಾಖೆಯ ಹೊರಡಿಸಿರುವ ಆದೇಶ ಸಂಖ್ಯೆ ಎಚ್‌ಎಎಚ್ 2016(ಭಾಗ 2) ಅನ್ನು ಪುನಃ ಪರಿಷ್ಕರಿಸಿ ಪ್ರಸ್ತುತ ಭೂಮಿಯ ದರ ಹೆಚ್ಚಿಸಿ ಆದೇಶ ಹೊರಡಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ವಿವಿಧ ವಸತಿ ಯೋಜನೆಗಳಡಿ ವಸತಿ ಸೌಲಭ್ಯ ಪಡೆಯಲು ಸ್ವಂತ ನಿವೇಶನ ಹೊಂದಿರಬೇಕು. ಸ್ವಂತದಾದ ನಿವೇಶನದ ಇಲ್ಲದ ಬಡವರು ವಸತಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಅಂತಹ ಬಡವರಿಗೆ ನವೇಶನ ಖರೀದಿಸಲು 5 ಲಕ್ಷ ರೂ ಆರ್ಥಿಕ ನೆರವು ನೀಡಬೇಕು. ವಸತಿ ಯೋಜನೆಯಡಿ ನೀಡುವ ಮನೆಗಳ ನಿರ್ಮಾಣ ವೆಚ್ಚ 5 ಲಕ್ಷ ರೂವರೆಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಬಗರ್ ಹುಕುಂ ಸಾಗುವಳಿದಾರರು ಸಕ್ರಮಕ್ಕಾಗಿ ಸಲ್ಲಿಸಿರುವ ನಮೂನೆ 57ರ ಅರ್ಜಿಯನ್ನು ಸೂಕ್ತ ಕಾರಣವನ್ನು ನೀಡದೆ ಏಕಪಕ್ಷೀಯವಾಗಿ ತಿರಸ್ಕಾರ ಮಾಡುತ್ತಿರುವುದರಿಂದ ಬೇರೆ ಭೂಮಿ ಇಲ್ಲದೆ ಕಳೆದ ಎಂಟು ದಶಕಗಳಿಂದ ಇದೇ ಭೂಮಿಯಲ್ಲಿ ಸಾಗುವಳಿ ಮಾಡಿ ಉಪ ಜೀವನ ಸಾಗಿಸುತ್ತಿರುವ ಬಡವರನ್ನು ಭೂ ಹಕ್ಕಿನಿಂದ ಒಕ್ಕಲೆಬ್ಬಿಸದೆ, ಸಕ್ರಮಗೊಳಿಸಿ ಹಕ್ಕು ಪತ್ರ ನೀಡಬೇಕು. ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರಿಗೆ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಈ ವೇಳೆ ಮೈಸೂರು ವಿಭಾಗ ಸಂಚಾಲಕ ಶಿವರಾಜ್ ಮರಳಿಗ, ಸಂಚಾಲಕ ವೆಂಕಟೇಶ್, ಮುಖಂಡರಾದ ಮಹೇಶ್, ಪ್ರಕಾಶ್, ಮಣಿಕಂಠ, ಚಂದ್ರಶೇಖರ್, ಸುಂದರ್, ಬಿ.ಆರ್.ಮಂಜುನಾಥ್, ರಾಜು, ಪಶುಪತಿ, ರವಿ ಇದ್ದರು.