ಮಹಿಳೆ ಮೇಲೆ ಹಲ್ಲೆ ನಡೆಸಿದವರ ಬಂಧನಕ್ಕೆ ಆಗ್ರಹ: ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮಂಡ್ಯ ನಗರದ ಜಿಲ್ಲಾ ಎಸ್ಪಿ ಕಚೇರಿ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮಂಡ್ಯ ನಗರದ ಜಿಲ್ಲಾ ಎಸ್ಪಿ ಕಚೇರಿ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಜಾಗದ ವಿವಾದ ಹಿನ್ನೆಲೆ ಮಹಿಳೆ ಮೇಲೆ ಹಲ್ಲೆ ನಡೆಸಿದ ಆರೋಪ
  • ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ
  • ತಪ್ಪಿತಸ್ಥರ ಬಂಧನಕ್ಕೆ ಆಗ್ರಹ
ಮಂಡ್ಯ: ತಾಲೂಕಿನ ಕಚ್ಚಿಗೆರೆ ಗ್ರಾಮದ ದಲಿತ ಸಮುದಾಯದ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಗ್ರಾಮದ ರಜನಿ ಎಂಬುವರ ಮೇಲೆ ಭೂ ವಿವಾದದ ನೆಪ ಮಾಡಿ ಅಮಾನುಷವಾಗಿ ದೌರ್ಜನ್ಯ ಮಾಡಲಾಗಿದೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ದಲಿತ ಸಮುದಾಯದವರ ಪ್ರಾಣ, ಆಸ್ತಿ ರಕ್ಷಣೆ ಮಾಡವಲ್ಲಿ ವಿಫಲವಾಗಿವೆ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ವೇ ನಂ.12/6ರಲ್ಲಿನ 5 ಗುಂಟೆ ಸ್ವಂತ ಜಮೀನು ಮತ್ತು 12/5ರ 8 ಖರಾಬು ಭೂಮಿಯ ಸ್ವಾಧೀನಾನುಭವದಲ್ಲಿರುವ ರಜನಿ ಅವರು 20 ತೆಂಗಿನ ಮರ ಬೆಳಸಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಭೂಮಿಯನ್ನು ಕಂದಾಯ ಮತ್ತು ಸರ್ವೇ ಇಲಾಖಾಧಿಕಾರಿಗಳು ನಿಮಾನುಸಾರ ಕ್ರಮ ವಹಿಸದೆ ಭೂ ವಿವಾದಕ್ಕೆ ಆಸ್ಪದ ಮಾಡಿಕೊಟ್ಟಿದ್ದಾರೆ. ಹಾಲಿ ಇರುವ ಸಾರ್ವಜನಿಕ ಬಂಡಿದಾರಿಯನ್ನು ಬಿಡದೆ ದಾರಿಗೆ ಅಡ್ಡಲಾಗಿ ಸೌದೆಗಳನ್ನಾಕಿ ಭತ್ತದ ಗಾಡಿ ಹೋಗಲು ಬಿಡದೆ ಅಡ್ಡಿಪಡಿಸಿ ಬಹಿರಂಗವಾಗಿ ಜಾತಿ ನಿಂದನೆ, ದೈಹಿಕ ಹಲ್ಲೆ, ಕೊಲೆ ಬೆದರಿಕೆ ಹಾಕಲಾಗಿದೆ ಎಂದರು.
ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ರಜನಿ ಅವರ ಮೇಲೆ ಈ ಹಿಂದೆಯೂ ಮಾರಣಾಂತಿಕ ದೌರ್ಜನ್ಯ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದ್ದರೂ ನಿರ್ಲಕ್ಷ್ಯ ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳ ಮೇಲೆಯೂ ದೌರ್ಜನ್ಯ ಕಾಯ್ದೆಯ ಕಲಂ 4ರಂತೆ ಕ್ರಮ ವಹಿಸಬೇಕು. ಆಕೆ ಜೀವ ಭಯದಲ್ಲಿರುವ ಕಾರಣ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಉಪಾಧ್ಯಕ್ಷ ಬಿ.ಆನಂದ್, ಮಹಿಳಾಧ್ಯಕ್ಷೆ ಸುಶ್ಮಿತಾ, ಮುಖಂಡರಾದ ನಾಗರಾಜು, ಸಿದ್ದಯ್ಯ, ಮುತ್ತರಾಜು, ಪುಟ್ಟಲಿಂಗಯ್ಯ, ಶಶಿರೇಖಾ, ಶರಾವತಿ, ಮಹದೇವ, ಸುರೇಶ್ ಕುಮಾರ್, ವೆಂಕಟೇಶ್, ಕರಿಯಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net