ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ.ಟಿ.ಎಚ್.ಆಂಜನಪ್ಪ ಮಾತನಾಡಿದರು. ಡಾ.ಚಂದ್ರಶೇಖರ್, ಚೌಡಪ್ಪ, ಗಿರೀಶ್, ಭರತ್‌ರಾಜ್, ಆನಂದ್, ರಾಮಣ್ಣ, ಅಪ್ಪಾಜಿಗೌಡ ಇದ್ದರು.
ಆರಂಭಿಕ ಹಂತದಲ್ಲೇ ತಪಾಸಣೆ ಮಾಡಿಸಿಕೊಂಡರೆ ಶೇ.90ರಷ್ಟು ಕಾಯಿಲೆಗಳನ್ನು ಗುಣಪಡಿಸಬಹುದು ಎಂದು ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ.ಟಿ.ಎಚ್.ಆಂಜನಪ್ಪ ಅಭಿಪ್ರಾಯಪಟ್ಟರು.
ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಪ್ರಖ್ಯಾತ ಸೀರೋಗ, ಪ್ರಸೂತಿ ಹಾಗೂ ಸ್ತ್ರೀ ಮೂತ್ರರೋಗ ತಜ್ಞೆ ಡಾ.ವೈ.ಎಂ.ಚಂದ್ರಶೇಖರ್‌ಮೂರ್ತಿ ಅವರಿಂದ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವಿಶೇಷವಾಗಿ ಮಹಿಳೆಯರಲ್ಲಿ ಕಂಡುಬರುವ ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಕಾಯಿಲೆಗಳ ಬಗ್ಗೆ ಮಹಿಳೆಯರು ವೈದ್ಯರಲ್ಲಿ ಮುಕ್ತವಾಗಿ ಮಾಹಿತಿ ಹಂಚಿಕೊಳ್ಳುವ ಮೂಲಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಇಂತಹ ಶಿಬಿರಗಳು ಗ್ರಾಮೀಣ ಜನರಿಗೆ ವರದಾನದಂತಿವೆ ಎಂದು ಹೇಳಿದರು.
ಆರೋಗ್ಯವೇ ಮಹಾಭಾಗ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಂಡು ಜೀವನಶೈಲಿ ಬದಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಬಿರದ ಆಯೋಜಕ ಡಾ.ಚಂದ್ರಶೇಖರ್‌ಮೂರ್ತಿ ಮಾತನಾಡಿ, ಸ್ತ್ರೀಯರು ಮತ್ತು ಗರ್ಭಿಣಿಯರು ಆರೋಗ್ಯವಾಗಿರಲು ತಿಂಗಳಿಗೊಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು. ಗರ್ಭಿಣಿಯರು ಮನೆಯಲ್ಲಿ ಹೆರಿಗೆ ತಪ್ಪಿಸಿ ಆಸ್ಪತ್ರೆಯಲ್ಲಿ ಸುಲಭ ಪ್ರಸೂತಿಗೆ ಒತ್ತು ನೀಡಬೇಕು ಎಂದರು.
ಶಿಬಿರದಲ್ಲಿ ತಳಗವಾದಿ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಬಂದ ನೂರಾರು ಜನರು ಸದುಪಯೋಗ ಪಡೆದುಕೊಂಡರು. ಮುಖಂಡರಾದ ಚೌಡಪ್ಪ, ಗಿರೀಶ್, ಭರತ್ ರಾಜ್, ಆನಂದ್, ರಾಮಣ್ಣ, ಅಪ್ಪಾಜಿಗೌಡ, ಚೊಟ್ಟನಹಳ್ಳಿ ಲೊಕೇಶ್(ಕೆಂಪಲಿಂಗ), ಯೋಗೇಶ ಇತರರು ಇದ್ದರು.