ವಿದ್ಯಾರ್ಥಿಗಳಿಗೆ ಡಾ.ರಾವ್ಸ್ ಅಕಾಡೆಮಿ ಮುಖ್ಯಸ್ಥ ಡಾ.ನಾಗೇಶ್ವರ್ ರಾವ್ ಸಲಹೆ
ಕೆ.ಎಂ.ದೊಡ್ಡಿ:
ಪ್ರತಿಯೊಬ್ಬ ವಿದ್ಯಾರ್ಥಿಯೂ ಗುರುಗಳ ಬಗ್ಗೆ ಗೌರವ, ಕೃತಜ್ಞತೆ ಮತ್ತು ಸೇವಾಭಾವ ಜೀವನ ಪರ್ಯಂತ ಉಳಿಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುತ್ತಾರೆ ಎಂದು ಡಾ.ರಾವ್ಸ್ ಅಕಾಡೆಮಿ ಮುಖ್ಯಸ್ಥ ಡಾ.ನಾಗೇಶ್ವರ್ ರಾವ್ ಸಲಹೆ ನೀಡಿದರು.
ಸಮೀಪದ ಹನುಮಂತನಗರದ ಭಾರತೀ ವಸತಿ ಸಂಯುಕ್ತ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಹಾಗೂ ಡಾ.ರಾವ್ಸ್ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪಾಲಕರ ದಿನಾಚರಣೆಯಲ್ಲಿ ಮಾತನಾಡಿದರು.
ಮಹರ್ಷಿ ವೇದವ್ಯಾಸರ ಜೀವನಾದರ್ಶ, ಅವರ ಜ್ಞಾನಸಾಧನೆ ಹಾಗೂ ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ಇರುವ ಉನ್ನತ ಸ್ಥಾನಮಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.
ಗುರು ಎಂದರೆ ಅಜ್ಞಾನವೆಂಬ ಅಂಧಕಾರವನ್ನು ದೂರ ಮಾಡಿ ಜ್ಞಾನದ ಬೆಳಕಿನತ್ತ ಕೊಂಡೊಯ್ಯುವ ಮಹಾನ್ ವ್ಯಕ್ತಿತ್ವ. ವ್ಯಕ್ತಿತ್ವ ವಿಕಾಸ, ಮೌಲ್ಯಾಧಾರಿತ ಶಿಕ್ಷಣ ಹಾಗೂ ಉತ್ತಮ ಸಮಾಜ ನಿರ್ಮಾಣದಲ್ಲಿ ಗುರುಗಳ ಪಾತ್ರ ಅನನ್ಯವಾಗಿದೆ ಎಂದರು.
ಬಿಇಟಿ ಕಾರ್ಯದರ್ಶಿ ಸಿದ್ದೇಗೌಡ ಮಾತನಾಡಿ, ಗುರುಗಳಿಗೆ ಗೌರವ ಸಲ್ಲಿಸುವ ಸಂಸ್ಕೃತಿ ಭಾರತೀಯ ಪರಂಪರೆಯಲ್ಲಿ ಒಂದಾಗಿದೆ. ವಿದ್ಯಾರ್ಥಿಗಳು ಕೇವಲ ಪಠ್ಯಜ್ಞಾನ ಗಳಿಸುವುದಷ್ಟೇ ಅಲ್ಲದೆ ಸಂಸ್ಕಾರ, ಶಿಸ್ತು, ಮಾನವೀಯತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಪುಟ್ಟಸ್ವಾಮಿ ಮಾತನಾಡಿ, ಗುರುಪೂರ್ಣಿಮೆ ಆಚರಣೆಯು ವಿದ್ಯಾರ್ಥಿಗಳಲ್ಲಿ ವಿನಯ, ಕೃತಜ್ಞತೆ, ಶಿಸ್ತು ಹಾಗೂ ಗುರುಭಕ್ತಿಯನ್ನು ಬೆಳೆಸಲಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಡಾ.ರಾವ್ಸ್ ಅಕಾಡೆಮಿ ಡೀನ್ ನಂದಾ ಯಲಮಾಲಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಪಾದಪೂಜೆ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು.
ಬಳಿಕ ಎಲ್ಲ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಗಂಧದ ತಿಲಕವಿಟ್ಟು, ಪುಷ್ಪಾರ್ಚನೆ ಮಾಡಿ ಆಶೀರ್ವಾದ ಪಡೆದರು. ವಿದ್ಯಾರ್ಥಿಗಳು ನೀಡಿದ ಗೌರವಕ್ಕೆ ಸ್ಪಂದಿಸಿದ ಶಿಕ್ಷಕರು, ಅವರ ಪ್ರೀತಿ ಮತ್ತು ಅಭಿಮಾನಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು.
ಕನ್ನಡ ಉಪನ್ಯಾಸಕರಾದ ಶಿವಲಿಂಗೇಗೌಡ, ಅರುಣ್ ಕುಮಾರ್, ಕಾರ್ಯಕ್ರಮದ ಸಂಯೋಜಕಿ ದೀಪಿಕಾ, ಶಿಕ್ಷಕರು ಬೋಧಕೇತರ ಸಿಬ್ಬಂದಿ ವರ್ಗ ಹಾಜರಿದ್ದರು.