ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಸರ್ಕಾರಿ ಆಸ್ತಿಗಳನ್ನು ಕಾಪಾಡಿಕೊಳ್ಳಲು ವಿಫಲವಾಗಿದೆ. ಸಂಸದರು ತರುವ ಅನುದಾನದಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳು ಭೂಮಿ ಪೂಜೆ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ಆರೋಪಿಸಿದರು.
ತಾಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮತ ಹೆಚ್ಚು ನೀಡಿರುವ ಗ್ರಾಮಗಳಿಗಷ್ಟೇ ಅಭಿವೃದ್ಧಿ ಕೆಲಸ ಎನ್ನುವ ಪರಿಸ್ಥಿತಿ ಕಾಂಗ್ರೆಸ್ ಶಾಸಕರಲ್ಲಿದೆ. ಆದರೆ, ನಾವು ಶಾಸಕರಾಗಿದ್ದಾಗ ಎಲ್ಲರನ್ನೂ ಸರಿಸಮನಾಗಿ ನೋಡುತ್ತಿದ್ದೆವು ಎಂದರು.
ಕೇಂದ್ರದಲ್ಲಿ ಸಚಿವರಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಶಕ್ತಿ ಮೀರಿ ರಾಜ್ಯದ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದಾರೆ. ಆದರೆ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಮಾಡಲು ಮಾತ್ರ ಸ್ಥಳ ಗುರುತಿಸಿಕೊಡುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷೃ ವಹಿಸಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೈಷುಗರ್ ಕಾರ್ಖಾನೆಗೆ ಅನುದಾನ ಬಿಡುಗಡೆ ಮಾಡಿದ್ದು, ಈಗ ಎಲ್ಲಿ ಹೋಯಿತು?. ಭ್ರಷ್ಟಾಚಾರ ಮಾಡುವ ಅಧ್ಯಕ್ಷರನ್ನು ಕಾರ್ಖಾನೆಗೆ ನೇಮಕ ಮಾಡಲಾಗಿದೆ. ಅವರಿಂದ ಕಾರ್ಖಾನೆ ಅಭಿವೃದ್ಧಿ ಅಸಾಧ್ಯವಾಗಿದೆ. ಕುಮಾರಸ್ವಾಮಿ ಅವರಿಗೆ ನಾಗಮಂಗಲದಲ್ಲಿ ಲೀಡ್ ಕೊಟ್ಟು ಗೆಲ್ಲಿಸಿಕೊಂಡೆವು. ಆಗಲೇ ಇವರೆಲ್ಲ ರಾಜೀನಾಮೆ ನೀಡಬೇಕಾಗಿತ್ತು. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಮತಗಳನ್ನೆಲ್ಲ ಸೂಪರ್‌ಸೀಡ್ ಮಾಡಿಸಿ ಸಚಿವ ಚಲುವರಾಯಸ್ವಾಮಿ ತನ್ನ ಮಗನನ್ನು ಅಧ್ಯಕ್ಷರನ್ನಾಗಿ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದಿದರು.
ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ಮತ್ತೆ ತರುತ್ತೇವೆ, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಹೋಗೋಣ, ಯಾವುದೇ ಕಿತ್ತಾಟಗಳಿಗೆ ಅವಕಾಶ ಮಾಡಿಕೊಡದೆ 2028ರ ವೇಳೆಗೆ ರಾಜ್ಯದಲ್ಲಿ ಹೊಸ ಅಲೆ ಹೇಳುತ್ತದೆ. ಎಲ್ಲರೂ ಪಕ್ಷ ಸಂಘಟನೆಯಲ್ಲಿ ತೊಡಗಿ ಎಂದು ಮನವಿ ಮಾಡಿದರು.
ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು, ಮುಖಂಡರಾದ ತಿಮ್ಮೇಗೌಡ, ಸಿದ್ದಪ್ಪ, ಶಶಿ, ರಾಜಣ್ಣ, ಗುಣಶೇಖರ್, ಸೋಮಣ್ಣ, ಲಿಂಗರಾಜು, ಪುಟ್ಟಸ್ವಾಮಿ ಇದ್ದರು.