ಕೆಲಸಕ್ಕಾಗಿ ಅಲೆಯುವ ಸ್ಥಿತಿ ನಿರ್ಮಾಣ

ಮದ್ದೂರು ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತಹಸೀಲ್ದಾರ್ ಪರಶುರಾಮಸತ್ತಿಗೇರಿ ರೈತರಿಂದ ಅಹವಾಲು ಸ್ವೀಕರಿಸಿದರು. ಧನಂಜಯ, ರಾಮಲಿಂಗಯ್ಯ, ಸೋಮಶೇಖರ್, ನವೀನ್, ನಾರಾಯಣಿ ಇದ್ದರು.
ಮದ್ದೂರು ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತಹಸೀಲ್ದಾರ್ ಪರಶುರಾಮಸತ್ತಿಗೇರಿ ರೈತರಿಂದ ಅಹವಾಲು ಸ್ವೀಕರಿಸಿದರು. ಧನಂಜಯ, ರಾಮಲಿಂಗಯ್ಯ, ಸೋಮಶೇಖರ್, ನವೀನ್, ನಾರಾಯಣಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದ ಮದ್ದೂರು ತಾಲೂಕು ಅಧ್ಯಕ್ಷ ಎಚ್.ಜಿ.ಪ್ರಭುಲಿಂಗು ಆಕ್ರೋಶ
  • ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅಧ್ಯಕ್ಷತೆಯಲ್ಲಿ ಅಹವಾಲು ಸ್ವೀಕಾರ
ಮದ್ದೂರು: ವಿವಿಧ ಇಲಾಖೆಗಳ ಬಹುತೇಕ ಸರ್ಕಾರಿಗಳು ಅಧಿಕಾರಿಗಳು ರೈತರ ಹಾಗೂ ಸಾರ್ವಜನಿಕರ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡುತ್ತಿಲ್ಲ. ಇದರಿಂದ ಕಚೇರಿಗೆ ನಿತ್ಯ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಜಿ.ಪ್ರಭುಲಿಂಗು ಆಕ್ರೋಶ ಹೊರ ಹಾಕಿದರು.
ನಗರದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ರೈತರ ಸಮಸ್ಯೆಗಳನ್ನು ಬಗೆಹರಿಸುವ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಚೇರಿಗೆ ಬರುವ ರೈತರು ಹಾಗೂ ಸಾರ್ವಜನಿಕರೊಂದಿಗೆ ಅಧಿಕಾರಿಗಳು ಸೌಜನ್ಯಯುತವಾಗಿ ವರ್ತಿಸಬೇಕು. ಜತೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸುವುದರ ಜತೆಗೆ ಶೀಘ್ರವಾಗಿ ಕೆಲಸಗಳನ್ನು ಮಾಡಿಕೊಡಬೇಕು. ಇಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಮಾಡಿದರು.
ರೈತ ಮುಖಂಡ ಕುದರಗುಂಡಿ ನಾಗರಾಜು ಮಾತನಾಡಿ, ತಾಲೂಕು ಕಚೇರಿಗೆ ನಿತ್ಯ ದೂರದ ಉರುಗಳಿಂದ ಹಣ ಖರ್ಚು ಮಾಡಿಕೊಂಡು ಸರ್ಕಾರಿ ಕೆಲಸಕ್ಕಾಗಿ ಬರುತ್ತಾರೆ. ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿರುವುದರಿಂದ ಜನರ ಕೆಲಸಗಳು ಸಮರ್ಪಕವಾಗಿ ಆಗುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡು ಜನರ ಕೆಲಸಗಳು ಶೀಘ್ರವಾಗಿ ಆಗುವಂತೆ ಮಾಡಬೇಕು ಎಂದರು.
ರೈತ ಮುಖಂಡ ರಾಮಲಿಂಗೇಗೌಡ ಮಾತನಾಡಿ, ತಾಲೂಕಿನಲ್ಲಿ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ಇದನ್ನು ತೆರವುಗೊಳಿಸಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದು ಏಕೆ ಎಂಬುದು ತಿಳಿಯುತ್ತಿಲ್ಲ. ಆತಗೂರು ಹೋಬಳಿಯಲ್ಲಿ ರೀ ಸರ್ವೇಯಲ್ಲಿ ಸಮಸ್ಯೆ ಉಂಟಾಗಿದ್ದು, ಇದನ್ನು ಶೀಘ್ರವಾಗಿ ಸರಿಪಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ರೈತ ಮುಖಂಡ ಮಣಿಗೆರೆ ರಾಮಣ್ಣ ಮಾತನಾಡಿ, ಸೆಸ್ಕ್ ಅಧಿಕಾರಿಗಳು ರೈತರುಹಾಗೂ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ಮನೆಯ ಮೇಲೆ ವಿದ್ಯುತ್ ವೇರ್ ಹೋಗಿದ್ದು, ಇದರಿಂದ ಅವಘಡಗಳು ಸಂಭವಿಸಬಹುದು ಎಂದು ದೂರು ನೀಡಿ ಒಂದು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ದೂರುವಾಣಿ ಕರೆ ಮಾಡಿದರು ಸ್ವೀಕರಿಸುತ್ತಿಲ್ಲ ಎಂದು ಆರೋಪಗಳ ಸುರಿಮಳೆಗೈದರು.
ಸರ್ಕಾರಿ ಶಾಲೆಗಳ ಬಲ ವರ್ಧನೆಗೆ ಯಾವ ಕ್ರಮ ಕೈಗೊಂಡಿದ್ದೀರಿ?. ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚಾಗಳು ಏನು ಮಾಡುತ್ತಿದ್ದೀರಿ ಎಂದು ರೈತ ಮುಖಂಡರಾದ ಸೊ.ಶಿ.ಪ್ರಕಾಶ್, ಗುಡಿದೊಡ್ಡಿ ಶಿವಲಿಂಗಯ್ಯ ಸೇರಿದಂತೆ ಹಲವು ಮುಖಂಡರು ಬಿಇಒ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಬಿಇಒ ಧನಂಜಯ, ಸರ್ಕಾರಿ ಶಾಲೆಯಲ್ಲಿ ನುರಿತ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ ಸೇರಿದಂತೆ ಎಲ್ಲ ರೀತಿಯ ಸವಲತ್ತುಗಳನ್ನು ನೀಡಲಾಗುತ್ತಿದೆ. ಹಾಜರಾತಿ ಹೆಚ್ಚಾಗಲು ದಾಖಲಾತಿ ಆಂದೋಲನ ಮಾಡುವ ಮಾಡಿ ಪಾಲಕರಿಗೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡುವಂತೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ರೈತರಿಗೆ ಸಿಗುವ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಾಲೆಗಳಲ್ಲಿ ಹೂಳು ತೆಗೆಸಿ ಸಮರ್ಪಕವಾಗಿ ಕೊನೆ ಭಾಗಕ್ಕೆ ನೀರು ಹರಿಸುವಂತೆ ಕ್ರಮ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿ ಕೆಲಸಗಳು ತ್ವರಿತಗತಿಯಲ್ಲಿ ಆಗುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿದ್ದ ರೈತ ಮುಖಂಡರು ಅಧಿಕಾರಿಗಳನ್ನು ಒತ್ತಾಯಿಸಿದರು.
ರೈತರ ಮನವಿ ಆಲಿಸಿದ ಮಾತನಾಡಿದ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ, ಸರ್ಕಾರಿ ಕಚೇರಿಗಳಲ್ಲಿ ರೈತರ ಹಾಗೂ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಳ್ಳಲು ಅನಗ್ಯವಾಗಿ ವಿಳಂಬ ಮಾಡುವ ಅಧಿಕಾರಿಗಳ ಬಗ್ಗೆ ಗಮನಕ್ಕೆ ತಂದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸರ್ಕಾರದ ಯಾವುದೇ ಇಲಾಖೆಗಳ ಅಧಿಕಾರಿಗಳು ರೈತರ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕು. ಅನಗತ್ಯವಾಗಿ ಕಚೇರಿಗೆ ಅಲೆಸಬಾರದು ಎಂದು ಎಚ್ಚರಿಕೆ ನೀಡಿದರು.
ತಾಲೂಕು ಕಚೇರಿಯಲ್ಲಿ ಸಿಗುವ ಆರ್.ಟಿ.ಸಿ, ಎಂ.ಆರ್. ಸೇರಿದಂತೆ ಅಗತ್ಯ ದಾಖಲೆಗಳು ವೆಬ್ ಸೆಟ್‌ನಲ್ಲಿ ಸಿಗುವಂತೆ ಮಾಡಲಾಗಿದೆ. ರೇಕಾರ್ಡ್ ರೂಮ್‌ನಲ್ಲಿರುವ ಕಡತ ಮಾಹಿತಿಯನ್ನು ಶೇ.50 ರಷ್ಟು ಈಗಾಗಲೇ ಸ್ಕ್ಯಾನ್ ಮಾಡಿ ವೆಬ್‌ಸೆಟ್‌ನಲ್ಲಿ ಸಿಗುವಂತೆ ವ್ಯವಸ್ಥೆ ಮಾಡಿದ್ದು, ಮುಂದಿನ ದಿನಗಳಲ್ಲಿ ಶೇ.100 ರಷ್ಟು ದಾಖಲೆಗಳು ಸಿಗುವಂತೆ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಸಭೆಯಲ್ಲಿ ಸ್ವೀಕೃತವಾದ ಅರ್ಜಿಗಳು: ಕಂದಾಯ ಇಲಾಖೆ 17, ಸರ್ವೇ, ಭೂಮಾಪನ 5, ಶಿಕ್ಷಣ ಇಲಾಖೆ 1, ಸಬ್ ರಿಜಿಸ್ಟರ್ 1 ಒಟ್ಟು 24 ಅರ್ಜಿಗಳು ಸ್ವೀಕೃತವಾದವು.
ಸಭೆಯಲ್ಲಿ ತಾಪಂ ಇಒ ರಾಮಲಿಂಗಯ್ಯ, ಬಿಇಒ ಧನಂಜಯ, ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್, ಆರಕ್ಷಕ ನಿರೀಕ್ಷರಾದ ಎಚ್.ಎಸ್.ನವೀನ್, ನಾರಾಯಣಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ರೈತ ಮುಖಂಡರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net