ಮಂಡ್ಯ: ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿವಾಸದ ಮೇಲಿನ ಜಾರಿ ನಿರ್ದೇಶನಾಲಯ (ಇಡಿ)ದ ದಾಳಿಯನ್ನು ಖಂಡಿಸಿ ಸಿಪಿಐ(ಎಂ) ಕಾರ್ಯಕರ್ತರು ನಗರದದಲ್ಲಿ ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪಿಣರಾಯಿ ವಿಜಯನ್ ಅವರ ಮೇಲೆ ದಾಳಿ ಮಾಡಿದ್ದು, ಇದು ರಾಜಕೀಯ ಪ್ರೇರಿತ ಪ್ರತೀಕಾರದ ಕೃತ್ಯವಾಗಿದೆ. ಪಿಣರಾಯಿ ವಿಜಯನ್ ಅವರಿಗೂ ಎಕ್ಸಲಾಜಿಕ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಾಲಯಗಳು ಪದೇ ಪದೆ ಹೇಳಿವೆ. ಆದರೂ ಅವರ ವಿರುದ್ಧದ ರಾಜಕೀಯ ಬೇಟೆ ನಿರಂತರವಾಗಿ ಮುಂದುವರಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ದೆಹಲಿಯಲ್ಲಿ ಪ್ರಧಾನಮಂತ್ರಿ ಅವರನ್ನು ಭೇಟಿಯಾದ ತಕ್ಷಣ ಇಂತಹ ಕ್ರಮವು ನಡೆಯುತ್ತಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ. ರಾಜಕೀಯವಾಗಿ ರಚಿಸಿದ ನಾಟಕದಂತೆ ಕಾಣುತ್ತದೆ. ಸಿಎಂಆರ್‌ಎಲ್ ಡೈರಿಯಲ್ಲಿ ಹೆಸರುಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿರುವ ಹಲವಾರು ವ್ಯಕ್ತಿಗಳು ರಾಜ್ಯ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿದ್ದಾರೆ. ಆದಾಗ್ಯೂ ಅವರೆಲ್ಲರನ್ನೂ ನಿರ್ಲಕ್ಷಿಸಿ ಪಿಣರಾಯಿ ವಿಜಯನ್ ಅವರನ್ನು ನಿರಂತರವಾಗಿ ಗುರಿಯಾಗಿಸುತ್ತಿರುವುದು ಈ ಕ್ರಮಗಳ ಹಿಂದಿನ ರಾಜಕೀಯ ಪ್ರತೀಕಾರವನ್ನು ಮತ್ತಷ್ಟು ಬಹಿರಂಗಪಡಿಸುತ್ತದೆ ಎಂದು ಆರೋಪಿಸಿದರು.
ಪಕ್ಷವು ಯಾವುದೇ ತನಿಖಾ ಪ್ರಕ್ರಿಯೆಯನ್ನು ತಡೆಯುವ ಉದ್ದೇಶವನ್ನು ಹೊಂದಿಲ್ಲ. ಆದರೆ, ಕೇಂದ್ರ ಸರ್ಕಾರವು ರಾಜಕೀಯ ಗುರಿಯಿಂದ ಕೇಂದ್ರ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುವುದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದಾಳಿ ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ಆಕ್ರೋಶಿಸಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್. ಕೃಷ್ಣೇಗೌಡ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಭರತ್ ರಾಜ್, ಸಿ.ಕುಮಾರಿ, ಬಿ. ಹನುಮೇಶ್, ಲಿಂಗರಾಜಮೂರ್ತಿ, ಜಿಲ್ಲಾ ಸಮಿತಿ ಸದಸ್ಯರಾದ ಕೃಷ್ಣ, ಚಂದ್ರಶೇಖರ, ಸುರೇಂದ್ರ, ಸುಶೀಲ, ಶೋಭಾ ಇತರರು ಭಾಗವಹಿಸಿದ್ದರು.