ಗೋ ರಕ್ಷಣಾ ಸಮಿತಿ ಪ್ರತಿಭಟನೆ: ಕೆಆರ್‌ಎಸ್ ಠಾಣೆ ಎಸ್‌ಐ ವಿರುದ್ಧ ಆಕ್ರೋಶ

ಮಂಡ್ಯ ನಗರದ ಪೊಲೀಸ್ ಅಧೀಕ್ಷಕರ ಕಚೇರಿ ಎದುರು ಗೋ ರಕ್ಷಣಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಪೊಲೀಸ್ ಅಧೀಕ್ಷಕರ ಕಚೇರಿ ಎದುರು ಗೋ ರಕ್ಷಣಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕಳ್ಳಸಾಗಾಣಿಕೆಗಾರರಿಗೆ ರಕ್ಷಣೆ ನೀಡುತ್ತಿರುವ ಆರೋಪ
  • ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹ
ಮಂಡ್ಯ: ಗೋರಕ್ಷಕರ ಮೇಲೆ ದೌರ್ಜನ್ಯ ಎಸಗಿದ ಆರೋಪ ಹಿನ್ನೆಲೆಯಲ್ಲಿ ಕೆಆರ್‌ಎಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ರಮೇಶ್ ಕರ್ಕಿಕಟ್ಟಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಗೋ ರಕ್ಷಣಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು, ಅಕ್ರಮವಾಗಿ ಗೋವುಗಳನ್ನು ಕಳ್ಳಸಾಗಾಣಿಕೆಗಾರರು ಹಾಗೂ ಅವರಿಗೆ ರಕ್ಷಣೆ ನೀಡುತ್ತಿದ್ದಾರೆಂದು ಆರೋಪಿಸಿ ಅಧಿಕಾರಿ ವಿರುದ್ಧ ಘೋಷಣೆ ಕೂಗಿದರು.
ಕಳೆದ ಎರಡು ಮೂರು ವರ್ಷದಿಂದ ಜಿಲ್ಲೆಯಲ್ಲಿ ಗೋವುಗಳ ಕಳ್ಳಸಾಗಾಣಿಕೆ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದು, ಈ ಬಗ್ಗೆ ಹಲವಾರು ಬಾರಿ ಗೋರಕ್ಷಕರು ಹಾಗೂ ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡುತ್ತಿದ್ದು, ಇಲಾಖೆಯವರು ಹಲವಾರು ಪ್ರಕರಣಗಳನ್ನೂ ದಾಖಲಿಸಿದ್ದಾರೆ. ಮಾ.20ರಂದು ಬೆಳಗ್ಗೆ 6.30ರ ಸಮಯದಲ್ಲಿ ಶ್ರೀರಂಗಪಟ್ಟಣ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ದರಸಗುಪ್ಪೆ ಗ್ರಾಮಸ್ಥರು, ಬೆಳ್ಳಾಳೆ ಕಡೆಯಿಂದ ಪಾಂಡವಪುರ ಕಿರಂಗೂರು, ಶ್ರೀರಂಗಪಟ್ಟಣ ಮಾರ್ಗವಾಗಿ ಮೈಸೂರು ಕಸಾಯಿಖಾನೆಗೆ ಅಕ್ರಮವಾಗಿ ಗೋಸಾಗಣೆ ಮಾಡುತ್ತಿರುವುದಾಗಿ ಶ್ರೀರಂಗಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ರಕ್ಷಿಸಿ ಗೋಕಳ್ಳರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.
ಬಳಿಕ ಗೋಕಳ್ಳರ ಪರವಾಗಿ 20ಕ್ಕೂ ಹೆಚ್ಚು ಜನ ಧಾವಿಸಿ, ಮಾಹಿತಿ ನೀಡಿದ ಕಾರ್ಯಕರ್ತರನ್ನು ನಿಂದಿಸಿ ಧಮ್ಕಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಹಿಂದೂ ಜಾಗರಣ ವೇದಿಕೆ ಮುಖಂಡರು ಪ್ರಶ್ನಿಸಿದಾಗ ಕೊಲೆ ಬೆದರಿಕೆ ಹಾಕಿದ್ದಾರೆ. ಈ ವೇಳೆ ಕೆಆರ್‌ಎಸ್ ಠಾಣೆ ಎಸ್‌ಐ ರಮೇಶ್ ಕರ್ಕಿಕಟ್ಟಿ ತಮ್ಮ ಕಾರ್ಯವಾಪ್ತಿ ಮೀರಿ ಗೋಕಳ್ಳರ ಪರವಾಗಿ ಮಾತನಾಡಿದರು. ಗೋರಕ್ಷಕರ ಮತ್ತು ಸಾರ್ವಜನಿಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ಚೌಕಟ್ಟಿನಲ್ಲಿರುವ ಸಾಮಾಜಿಕ ಕಾರ್ಯನಿರ್ವಹಿಸುತ್ತಿರುವ ಗೋರಕ್ಷಕರ ಮತ್ತು ಸಾರ್ವಜನಿಕರ ವಿರುದ್ಧ ದೌರ್ಜನ್ಯ ಎಸಗಿ ಗೋರಕ್ಷಕರ ಮತ್ತು ಸಾರ್ವಜನಿಕರ ನೈತಿಕ ಬಲವನ್ನು ಕುಗ್ಗಿಸಿ, ಗೋಕಳ್ಳರಿಗೆ ಉತ್ತೇಜನ ನೀಡುವ ರೀತಿ ಮಾತನಾಡಿದ್ದಾರೆ. ಇತ್ತೀಚಿನ ಮಾಹಿತಿಯನ್ನು ಗಮನಿಸಿದಾಗ ರಮೇಶ್ ಕರ್ಕಿಕಟ್ಟಿ ಸೇರಿದಂತೆ ಜಿಲ್ಲಾದ್ಯಂತ ಕೆಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಅಕ್ರಮ ಕಳ್ಳಸಾಗಾಣಿಕೆಗಾರರಿಗೆ ರಕ್ಷಣೆ ನೀಡುತ್ತಿರುವ ಸಂಶಯ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿ ಮತ್ತು ನೌಕರರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಚಂದನ್, ಬಾಲರಾಜು, ವಸಂತ್‌ಕುಮಾರ್, ಸೃಜನ್, ವಿಶ್ವ, ನಿತ್ಯಾನಂದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net