ಸಹಕಾರಿ ಕ್ಷೇತ್ರದಲ್ಲಿ ರಂಗಯ್ಯ ಅತ್ಯುತ್ತಮ ಸೇವೆ: ಸಹಕಾರ ಸಂಘಗಳ ಇಲಾಖೆ ಹೆಚ್ಚುವರಿ ನಿರ್ದೇಶಕ ಎಚ್.ಜಯದೇವ್ ಮೆಚ್ಚುಗೆ

ಮಂಡ್ಯ ನಗರದ ಕೆವಿಎಸ್ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಸಹಕಾರಿ ಎಸ್.ಎಲ್.ಮೋಹನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಡ್ಯ ನಗರದ ಕೆವಿಎಸ್ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಸಹಕಾರಿ ಎಸ್.ಎಲ್.ಮೋಹನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ
  • ಕರ್ನಾಟಕ ಸಂಘ, ಎಂ.ಎಲ್.ಶ್ರೀಕಂಠೇಗೌಡ ಸಂಶೋಧನಾ ಕೇಂದ್ರದಿಂದ ಆಯೋಜನೆ
ಮಂಡ್ಯ: ಸಹಾಯಕ ಉಪ ನೋಂದಣಾಧಿಕಾರಿಯಾಗಿ ಎನ್.ಆರ್.ರಂಗಯ್ಯ ರಾಜ್ಯದ ಹಲವು ಜಿಲ್ಲೆಗಳಲ್ಲಿ ಟಿಎಪಿಸಿಎಂಎಸ್‌ಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಹೊಸ ಯೋಜನೆಗಳನ್ನು ತಂದುಕೊಡುವಲ್ಲಿ ಶ್ರಮ ವಹಿಸಿದ್ದಾರೆ. ಈ ಮೂಲಕ ಸಹಕಾರ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಬೆಂಗಳೂರು ಸಹಕಾರ ಸಂಘಗಳ ಇಲಾಖೆ ಹೆಚ್ಚುವರಿ ನಿರ್ದೇಶಕ ಎಚ್.ಜಯದೇವ್ ಶ್ಲಾಘಿಸಿದರು.
ನಗರದ ಕೆವಿಎಸ್ ಭವನದಲ್ಲಿ ಕರ್ನಾಟಕ ಸಂಘ, ಎಂ.ಎಲ್.ಶ್ರೀಕಂಠೇಗೌಡ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಎನ್.ಆರ್.ರಂಗಯ್ಯ ಸಹಕಾರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ನನ್ನ ಮತ್ತು ರಂಗಯ್ಯ ಅವರ ನಡುವೆ ಅವಿನಾಭಾವ ಸಂಬಂಧವಿತ್ತು. ದಕ್ಷತೆ ಹಾಗೂ ಶಿಸ್ತಿಗೆ ಹೆಸರುವಾಸಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಇವರು ಬೇರೆಯವರಿಗೂ ಮಾದರಿಯಾಗಿದ್ದರು. ಈಗ ಇವರ ಹೆಸರಿನಲ್ಲಿ ಪ್ರಶಸ್ತಿಯನ್ನು ಹಿರಿಯ ಸಹಕಾರಿ ಎಸ್.ಎಲ್.ಮೋಹನ್ ಅವರಿಗೆ ನೀಡುತ್ತಿರುವುದು ಶ್ಲಾಘನೀಯ. ಇವರು ನೋಡಲು ಗಡಸುತನದಿಂದ ಕಂಡರೂ ಮೃದು ವ್ಯಕ್ತಿತ್ವ ಉಳ್ಳವರಾಗಿದ್ದಾರೆ ಎಂದು ತಿಳಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಡಾ.ಬಿ.ಜಯಪ್ರಕಾಶಗೌಡ ಅವರು ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ನನಗಿಂತ ಸೀನಿಯರ್ ಅವರು ಒಟ್ಟಿಗೆ ಕಲಿಕೆಯಲ್ಲಿ ತೊಡಗಿದ್ದೆವು. ಎನ್.ಆರ್.ರಂಗಯ್ಯ ಅವರು ಅಣ್ಣನ ಸ್ಥಾನದಲ್ಲಿದ್ದರು. ಇವರು 1968ರಲ್ಲಿ ಕೆಎಎಸ್ ಅಧಿಕಾರಿಯಾಗಿ ಆಗಿ ಪ್ರೊಬೆಷನರಿ ಹುದ್ದೆಯನ್ನು ಕೋಲಾರದಲ್ಲಿ ಮಾಡುತ್ತಾರೆ. ಮದ್ದೂರು ಕೆಎಎಸ್ ತದನಂತರ ಚಿತ್ರದುರ್ಗದಲ್ಲಿ ಜಿಲ್ಲಾ ಯೋಜನಾಧಿಕಾರಿಯಾಗಿ ಆಯ್ಕೆಯಾಗುತ್ತಾರೆ ಎಂದರು.
ಅಭಿನಂದನಾ ನುಡಿಯಾಡಿದ ಕವಯಿತ್ರಿ ಭವಾನಿ ಲೋಕೇಶ್, ಸಹಕಾರ ಕ್ಷೇತ್ರದ ಬಗ್ಗೆ ಅಪಾರವಾದ ಗೌರವ ಇಟ್ಟುಕೊಂಡಿದ್ದ ಎನ್.ಆರ್.ರಂಗಯ್ಯ ಅವರು ಇತರರಿಗೂ ಮಾದರಿಯಾಗಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಹೆಸರು ಮಾಡುವುದು ಹಾಗೂ ನಿರ್ದೇಶಕರಾಗುವುದು ಕಷ್ಟದ ಕೆಲಸವಾಗಿದ್ದು, ಬೇಕಿದ್ದರೆ ಶಾಸಕರಾಗಬಹುದು. ಈ ನಿರ್ದೇಶಕರಾಗುವುದು ಕಷ್ಟ ಎನ್ನುವ ಮಾತು ಈ ಸಭೆಯಲ್ಲಿಯೇ ಕೇಳಿ ಬಂದಿತು. ಆದರೆ ಎಸ್.ಎಲ್.ಮೋಹನ್ ಅವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಏಳು ಬಾರಿ ನಿರ್ದೇಶಕ, ಮೂರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಹಾಗಾಗಿ ಈ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡುವುದು ಒಂದು ಮೌಲ್ಯದ ಸಂಗತಿ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಮಾತನಾಡಿ, ಸಹಕಾರಿ ಕ್ಷೇತ್ರವು ಪ್ರಾಮಾಣಿಕತೆಯಿಂದಲೇ ಹೋಗುತ್ತಿದೆ. ಸಹಕಾರಿ ಕ್ಷೇತ್ರವು ಮುಳುಗಿದರೆ ನಾವೆಲ್ಲರೂ ಮುಳುಗಿದಂತೆ. ಒಂದು ಕಾಲದಲ್ಲಿ ಸಹಕಾರಿ ಕ್ಷೇತ್ರವು ನಮ್ಮ ರೈತರನ್ನು ಕಾಪಾಡಿದೆ. ಪ್ರಸ್ತುತದಲ್ಲಿ ಸಹಕಾರಿ ಕ್ಷೇತ್ರವು ವಿಫಲವಾಗುತ್ತಿರುವ ಬಗ್ಗೆ ಯೋಚನೆ ಮಾಡಬೇಕು. ಸಹಕಾರಿ ಕ್ಷೇತ್ರದಲ್ಲಿ ಮಾದರಿಯಾಗಿ ಕೆಲಸ ಮಾಡುತ್ತಿರುವ ಮೋಹನ್ ಅವರಿಗೆ ಪ್ರಶಸ್ತಿ ನೀಡುವ ಮೂಲಕ ರೈತರಿಗೂ ಮಾದರಿಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ವೈದ್ಯೆ ಎನ್.ಆರ್.ರಾಜೇಶ್ವರಿ, ಸಂಘದ ಕಾರ್ಯದರ್ಶಿಗಳಾದ ಚಂದಗಾಲು ಲೋಕೇಶ್, ಎಂ.ಕೆ.ಹರೀಶ್‌ಕುಮಾರ್ ಇತರರಿದ್ದರು. ಇದೇ ವೇಳೆ ಕೆ.ಆರ್.ಪೇಟೆ ತಾಲೂಕು ಶೀಳನೆರೆ ಗ್ರಾಮದ ಎಸ್.ಎಲ್.ಮೋಹನ್ ಅವರಿಗೆ 20 ಸಾವಿರ ರೂ ನಗದಿನ ಜತೆಗೆ ಎನ್.ಆರ್.ರಂಗಯ್ಯ ಸಹಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಹಕಾರಿ ಕ್ಷೇತ್ರಕ್ಕೆ ಕೆವಿಎಸ್, ಚೌಡಯ್ಯ ಕೊಡುಗೆ
ಸಹಕಾರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಸಹಕಾರಿ ಎಸ್.ಎಲ್.ಮೋಹನ್, ವರ್ಗೀಸ್ ಕುರಿಯನ್ ಅವರು ಗುಜರಾತ್‌ನಲ್ಲಿ ಅಮುಲ್ ಹೆಸರಿನಲ್ಲಿ ಹಾಲಿನ ಸಂಸ್ಥೆಯನ್ನು ಹುಟ್ಟುಹಾಕಿ ದೇಶದಲ್ಲಿಯೇ ಕ್ಷೀರ ಕ್ರಾಂತಿಯನ್ನು ಮಾಡಿ ಬಡವರಿಗೆ ಸ್ವಾಭಿಮಾನ ಜೀವನ ಮಾಡಲು ದಾರಿ ಮಾಡಿಕೊಟ್ಟರು. ಜತೆಗೆ ಸಹಕಾರ ಕ್ಷೇತ್ರ ಮಾಡಲು ಇದೊಂದು ನಿರ್ಣಯ ಮಾಡಿಕೊಟ್ಟರು. ಜಿಲ್ಲೆಯಲ್ಲಿ ಕ್ರಾಂತಿಕಾರಿ ಸಹಕಾರಿ ಕ್ಷೇತ್ರ ಉಳಿಯುವಲ್ಲಿ ಕೆ.ವಿ.ಶಂಕರಗೌಡ ಹಾಗೂ ಡಾ.ಎಚ್.ಡಿ.ಚೌಡಯ್ಯ ಅವರು ಸಹಾಯ ಮಾಡಿದ್ದಾರೆ. ಅದೇ ರೀತಿ ಪ್ರತಿ ತಾಲೂಕಿನಲ್ಲಿಯೂ ಒಬ್ಬ ಹಿರಿಯ ಸಹಕಾರಿ ಇದ್ದೇ ಇರುತ್ತಾರೆ. ಅವರನ್ನು ಸ್ಮರಿಸುವ ಕೆಲಸ ಅಗಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net