ಪಾಂಡವಪುರ ಪಟ್ಟಣದ ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಲ್ ಕಾರ್ಟ್ (ವಿಶೇಷ ತಳ್ಳುವ ಗಾಡಿ)ಗಳನ್ನು ವಿತರಿಸಿದರು. ಎ.ಎಲ್.ಕೆಂಪೂಗೌಡ, ವೈ.ಪಿ.ಮಂಜುನಾಥ್ ಇತರರು ಇದ್ದರು.
ಪಾಂಡವಪುರ: ಪುಟ್ಟಣ್ಣಯ್ಯ ಫೌಂಡೇಷನ್ ಮತ್ತು ಸೆಲ್ಕೋ ಫೌಂಡೇಷನ್ ವತಿಯಿಂದ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಹಸಿರು ಜೀವನ ಚಕ್ರ ಎಂಬ ಹೆಸರಿನಡಿ ಬೀದಿ ಬದಿ ವ್ಯಾಪಾರಿಗಳಿಗೆ ಗುರುವಾರ ಕೂಲ್ ಕಾರ್ಟ್(ವಿಶೇಷ ತಳ್ಳುವ ಗಾಡಿ)ಗಳನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ವಿತರಿಸಿದರು.
ಬಳಿಕ ಮಾತನಾಡಿ, ಬೀದಿ ಬದಿಯ ಸಣ್ಣ ವ್ಯಾಪಾರಿಗಳಿಗೆ ನಷ್ಟ ತಂದೊಡ್ಡದಂತೆ ವಿನ್ಯಾಸಗೊಳಿಸಿರುವ ಅತ್ಯಾಧುನಿಕ ಸೌಲಭ್ಯಗಳುಳ್ಳ ಕೂಲ್ ಕಾರ್ಟ್‌ಗಳು ವ್ಯಾಪಾರಿಗಳ ಅನುಕೂಲಕ್ಕೆ ತಕ್ಕಂತೆ ಸಿದ್ಧಪಡಿಸಲಾಗಿದೆ. ಬೀದಿ ಬದಿ ವ್ಯಾಪಾರಿಗಳು ಬಿಸಿಲು, ಮಳೆ ಮತ್ತು ಇನ್ನಿತರ ಹವಾಮಾನ ವೈಪರೀತ್ಯಗಳಿಂದ ಎದುರಿಸುತ್ತಿದ್ದ ನಷ್ಟಕ್ಕೆ ಬ್ರೇಕ್ ಹಾಕಲು ಈ ವಿಶಿಷ್ಟ ತಂತ್ರಜ್ಞಾನದ ಗಾಡಿಗಳನ್ನು ವಿನ್ಯಾಸಗೊಳಿಸಲಾಗಿದೆ. ಸೊಪ್ಪು, ತರಕಾರಿ, ಹಣ್ಣು ಹಾಗೂ ಹೂವುಗಳ ತಾಜಾತನ ಕೆಡದಂತೆ ಈ ಕಾರ್ಟ್‌ಗಳು ರಕ್ಷಣೆ ನೀಡುತ್ತದೆ ಎಂದು ವಿವರಿಸಿದರು.
ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಕ್ಷೇತ್ರದಾದ್ಯಂತ ಒಟ್ಟು 15 ಕೂಲ್ ಕಾರ್ಟ್‌ಗಳನ್ನು ಪ್ರಾಯೋಗಿಕವಾಗಿ ವಿತರಿಸಲಾಗಿದೆ. ಸೆಲ್ಕೋ ಫೌಂಡೇಷನ್ ವಿನ್ಯಾಸಗೊಳಿಸಿರುವ ಈ ಕಾರ್ಟ್‌ಗಳಿಂದ ಬೀದಿ ಬದಿ ವ್ಯಾಪಾರಿಗಳಿಗೆ ಅನೇಕ ರೀತಿಯ ಅನುಕೂಲಗಳು ದೊರೆಯಲಿದೆ. ಹಣ್ಣು, ತರಕಾರಿ, ಹೂವುಗಳನ್ನು ದೀರ್ಘ ಕಾಲ ಇಟ್ಟುಕೊಂಡು ವ್ಯಾಪಾರ ಮಾಡಬಹುದು. ಕೂಲ್ ಕಾರ್ಟ್‌ಗಳಿಗೆ ವಿದ್ಯುತ್ ಅವಶ್ಯಕತೆ ಇಲ್ಲ. ಗಾಡಿಯಲ್ಲಿ ಅಳವಡಿಕೆ ಮಾಡಿರುವ ಸೋಲಾರ್ ವ್ಯವಸ್ಥೆ ಬ್ಯಾಟರಿ ಬ್ಯಾಕ್ ಅಪ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ವ್ಯಾಪಾರಿಗಳಿಂದ ಶಾಸಕರಿಗೆ ಧನ್ಯವಾದ : ಅತ್ಯಾಧುನಿಕ ತಂತ್ರಜ್ಞಾನದ ಕಾರ್ಟ್‌ಗಳನ್ನು ಪಡೆದುಕೊಂಡ ಬೀದಿ ಬದಿ ವ್ಯಾಪಾರಿಗಳು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಧನ್ಯವಾದ ತಿಳಿಸಿದರು.
ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ವೈ.ಪಿ.ಮಂಜು, ಮಾಜಿ ಅಧ್ಯಕ್ಷ ಪಿ.ನಾಗರಾಜು, ಪುಟ್ಟಣ್ಣಯ್ಯ ಫೌಂಡೇಷನ್ ಸಿಇಒ ರಣಜಿತ್, ಮುಖಂಡರಾದ ರಾಘವ ಪ್ರಕಾಶ್, ಅರಳಕುಪ್ಪೆ ರೂಪಾ, ಪುರಸಭೆ ನಾಮಿನಿ ಸದಸ್ಯರಾದ ಎಚ್.ಎಲ್.ಮುರುಳಿ, ಲಕ್ಷ್ಮೇಗೌಡ ಇತರರು ಇದ್ದರು.