ಮಾನವೀಯತೆ ಬೆಳೆಸುವ ಯೋಗಾಭ್ಯಾಸ: ವ್ಯಾಸಭಾರತಿ ತ್ರೈಯೋಗ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಯೋಗಿನಿ ಕಾಲೀಜಿ ಅಭಿಮತ

  ಮಂಡ್ಯ ನಗಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ವ್ಯಾಸಭಾರತಿ ತ್ರೈಯೋಗ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಯೋಗಿನಿ ಕಾಲೀಜಿ ಯೋಗ ಮುದ್ರೆ ತೋರಿಸಿದರು.
ಮಂಡ್ಯ ನಗಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ವ್ಯಾಸಭಾರತಿ ತ್ರೈಯೋಗ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಯೋಗಿನಿ ಕಾಲೀಜಿ ಯೋಗ ಮುದ್ರೆ ತೋರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರದ ಪ್ರೆಸ್‌ಕ್ಲಬ್‌ನಲ್ಲಿ ಸಂವಾದ
  • ಚಂದ್ರವನ ಆಶ್ರಮ, ಪತ್ರಕರ್ತರ ಸಂಘದ ವತಿಯಿಂದ ಆಯೋಜನೆ
ಮಂಡ್ಯ: ಯೋಗವು ಏಕಾಗ್ರತೆ, ಸ್ಮರಣಶಕ್ತಿ, ಭಾವನಾತ್ಮಕ ಸಮತೋಲನ, ಶಿಸ್ತು ಮತ್ತು ವ್ಯಕ್ತಿತ್ವ ವಿಕಸನವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಉಸಿರಿನ ಜಾಗೃತಿ ಮತ್ತು ಧ್ಯಾನ ವಿಚಲನಗಳ ಮಧ್ಯೆಯೂ ಏಕಾಗ್ರರನ್ನಾಗಿ ಮಾಡುತ್ತದೆ ಎಂದು ವ್ಯಾಸಭಾರತಿ ತ್ರೈಯೋಗ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಯೋಗಿನಿ ಕಾಲೀಜಿ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಚಂದ್ರವನ ಆಶ್ರಮ, ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಅನಿಶ್ಚಿತೆಯ ಯುಗದಲ್ಲಿ ಯೋಗ ಮನುಕುಲಕ್ಕೆ ಶಾಂತಿ, ಶಕ್ತಿಯ ಮಾರ್ಗವನ್ನೇ ನೀಡುತ್ತದೆ. ಯುದ್ಧ ಮತ್ತು ಭಯೋತ್ಪಾದನೆಯ ಪ್ರಸ್ತುತ ದಿನಮಾನಗಳಲ್ಲಿ ಮಾನವೀಯತೆಯನ್ನು ಬೆಳೆಸುವಲ್ಲಿ ಯೋಗವು ನಿರ್ಣಾಯಕ ಪಾತ್ರ ವಹಿಸುತ್ತದೆ. ಯೋಗದ ಬಗ್ಗೆ ಭಾರತದ ಮಾರ್ಗದರ್ಶನ ಅತ್ಯವಶ್ಯಕ ಎಂದು ಪ್ರತಿಪಾದಿಸಿದರು.
ಕ್ರಿಯಾವತಿ ಸಿದ್ಧಿಯ ಮಾರ್ಗದರ್ಶನದಲ್ಲಿ ಸ್ವಯಂ ಸ್ಫೂರ್ತಿಯಾದ ಯೋಗಸ್ಫೂರ್ತಿಯಾದ ಯೋಗಪ್ರವಾಹವಾಗಿ ತ್ರೈಯೋಗ ಉದಯವಾಯಿತು. ಕಾಲಕ್ರಮೇಣ ಆಸನ, ಪ್ರಾಣಾಯಾಮ, ಮುದ್ರ ಮತ್ತು ಧಾರಣೆಯ ಸಂಪೂರ್ಣ ವಿಧಾನಗಳು ಸಹಜವಾಗಿ ಹೊರಹೊಮ್ಮಿದವು. ಹೀಗೆ ದೇರ, ಉಸಿರು ಮತ್ತು ಮನಸ್ಸನ್ನು ಧ್ಯಾನದ ಪ್ರವಾಹದಲ್ಲಿ ಒಂದಾಗಿಸುವ ಸಮಗ್ರ ಯೋಗಪಥವಾಗಿ ತ್ರೈಯೋಗ ಬೆಳೆಯಿತು. ಮುದ್ರೆಯು ಯೋಗದ ಒಂದು ಭಾಗ. ತ್ರೈಯೋಗದಲ್ಲಿ ಮುದ್ರೆ, ಆಸನ, ಪ್ರಾಣಾಯಾಮ ಇವೆ. ಮುದ್ರವು ನಮ್ಮ ಪ್ರಾಣಶಕ್ತಿಯನ್ನು ವೃದ್ಧಿಸುತ್ತದೆ. ಸತ್, ಚಿತ್, ಆನಂದಕ್ಕೆ ಮುದ್ರೆಗಳು ನೆರವಾಗುತ್ತವೆ ಎಂದು ವಿವರಿಸಿದರು.
ಉನ್ನತ ಚೇತನಾವಸ್ಥೆಯಿಂದ ಸ್ವಯಂಸ್ಫೂರ್ತಿಯಾಗಿ ಉದಯಿಸುವ ಯೋಗಪ್ರವಾಹವೇ ಕ್ರಿಯಾವತಿ ಸಿದ್ಧಿ. ಪ್ರಾಚೀನ ಯೋಗಪರಂಪರೆಯಲ್ಲಿ ಇದು ಅಪರೂಪದ ದಿವ್ಯಸ್ಥಿತಿ ಎಂದು ಪರಿಗಣಿಸಲಾಗಿದೆ. ಈ ಪ್ರಕ್ರಿಯೆಯ ಮೂಲಕ 1300ಕ್ಕೂ ಹೆಚ್ಚು ಮುದ್ರೆಗಳು ಹಾಗೂ ಸಂಪೂರ್ಣ ಯೋಗ ಪದ್ಧತಿಗಳು ಸಹಜವಾಗಿ ಹೊರಹೊಮ್ಮಿವೆ ಎಂದು ತಿಳಿಸಿದರು.
ವ್ಯಾಯಾಯ ದೇಹವನ್ನು ತರಬೇತುಗೊಳಿಸುತ್ತದೆ. ಯೋಗ ಸಂಪೂರ್ಣ ವ್ಯಕ್ತಿತ್ವವನ್ನು ಪರಿವರ್ತಿಸುತ್ತದೆ. ಯೋಗವು ಅಂತಿಮವಾಗಿ ಆತ್ಮಸಾಕ್ಷಾತ್ಕಾರ ಮತ್ತು ಆಂತರಿಕ ಜಾಗೃತಿಯ ಆಧ್ಯಾತ್ಮಿಕ ವಿಜ್ಞಾನವಾಗಿದೆ ಎಂದು ಪ್ರತಿಪಾದಿಸಿದರು.
ವ್ಯಾಸಭಾರತಿ ತ್ರೈಯೋಗ ವಿವಿ ಕುಲಪತಿ ಡಾ. ರಾಘವೇಂದ್ರ ಪೈ ಮಾತನಾಡಿ, ಯೋಗಿನಿ ಕಾಲೀಜಿ ಅವರು ಬಾಲ್ಯದಲ್ಲೇ ಅಧ್ಯಾತ್ಮದತ್ತ ಒಲವು ತೋರಿದವರು. ಚಿಕ್ಕ ವಯಸ್ಸಿನಲ್ಲೇ ಅವರು ಯೋಗ ಮತ್ತು ಮುದ್ರೆಗಳಲ್ಲಿ ಸಾಧನೆ ಮಾಡದ ಸಾಧಕಿ. 900 ಮುದ್ರೆಗಳಿಂದಲೇ ಪ್ರಾರಂಭ ಮಾಡಿದ ಅವರು, ಇಂದು 2 ಸಾವಿರಕ್ಕೂ ಹೆಚ್ಚು ಮಾದರಿ ಮುದ್ರೆಗಳನ್ನು ತೋರಿಸುತ್ತಾರೆ. ವಿಶ್ವದ 46 ರಾಷ್ಟ್ರಗಳಲ್ಲಿ ಕಾಲೀಜಿ ಅವರ ತ್ರೈಯೋಗದ 56 ಕೇಂದ್ರಗಳಿವೆ. ಕಾಲೀಜಿ ಅವರಿಗೆ ಧ್ಯಾನ, ಆಸನ, ಪ್ರಾಣಾಯಾಮ, ಉಸಿರಾಟದ ಅಭ್ಯಾಸಗಳು, ಏಕಾಗ್ರತೆಯ ತಂತ್ರಗಳ ಕಲಿಕೆ ಹಾಗೂ ಬೋಧನೆ ಕರಗತ ಮಾಡಿಕೊಂಡವರು. ಕರ್ನಾಟಕ ಸಂಗೀತ, ತಬಲಾ, ಹಾರ್ಮೋನಿಯಂ ಕಲಾವಿದರೂ ಆಗಿದ್ದಾರೆ. ಭಾರತದ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಅವರಲ್ಲಿರುವ ಯೋಗ, ಮುದ್ರೆ, ಪ್ರಾಣಾಯಾಮವನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆ. ವಿಶ್ವದ 228 ಗಣ್ಯ ಮಹಿಳೆಯರ ಸಾಲಿನಲ್ಲಿ ಕಾಲೀಜಿ ಸಹ ಒಬ್ಬರಾಗಿದ್ದಾರೆ ಎಂದು ವಿವರಿಸಿದರು.
ಚಂದ್ರವನ ಆಶ್ರಮದ ಶ್ರೆ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಯೋಗಪಥದಲ್ಲಿ ಜಲಯೋಗದಲ್ಲಿ ಸಾಧನೆ ಮಾಡಿದ್ದೇವೆ. ಅದೇ ರೀತಿ ಕಾಲೀಜಿ ಸಹ ಯೋಗ ಮತ್ತು ಮುದ್ರೆಯಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ದೂರದ ಅಮೆರಿಕದಲ್ಲಿ ಹುಟ್ಟಿ ಬೆಳೆದು ಭಾರತದ ಸನಾತನ ಪದ್ಧತಿಯನ್ನು ಅನುಕರಣೆ ಮಾಡಿರುವ ಇವರ ಸಾಧನೆಯನ್ನು ನಮ್ಮವರಿಗೂ ಪರಿಚಯ ಮಾಡಿಕೊಡಬೇಕೆಂಬುದು ನಮ್ಮ ಆಶಯವೂ ಆಗಿದೆ. ಇಂತಹ ಸಾಧಕರಿಂದ ನಮ್ಮವರೂ ಯೋಗ, ಪ್ರಾಣಾಯಾಮ, ಮುದ್ರೆಯಂತಹ ವಿದ್ಯೆಗಳಲ್ಲಿ ಸಾಧನೆ ಮಾಡಿ ಹೆಸರು ಮಾಡಬೇಕು. ಈ ನಿಟ್ಟಿನಲ್ಲಿ ಆಶ್ರಮ ಪೂರ್ಣ ಸಹಕಾರ ನೀಡುತ್ತದೆ ಎಂದರು.
ಇದೇ ವೇಳೆ ಪತ್ರಕರ್ತರ ಸಂಘದ ವತಿಯಿಂದ ಯೋಗಿನಿ ಕಾಲೀಜಿ, ಶ್ರೆ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಹಾಗೂ ಡಾ. ರಾಘವೇಂದ್ರ ಪೈ ಅವರನ್ನು ಸನ್ಮಾನಿಸಲಾಯಿತು.

ಯುವಜನತೆ ಆಧ್ಯಾತ್ಮಿಕ ಸಂಪತ್ತಿನ ವಾರಸುದಾರರು
ಭಾರತದ ಯುವಜನತೆ ಮಾನವಕುಲದ ಅತ್ಯಂತ ಮಹತ್ತರವಾದ ಆಧ್ಯಾತ್ಮಿಕ ಸಂಪತ್ತಿನ ವಾರಸುದಾರರು. ನಿಮ್ಮ ಬೇರುಗಳನ್ನು ಮರೆಯಬೇಡಿ, ಆಧುನಿಕ ಶಿಕ್ಷಣದೊಂದಿಗೆ ಯೋಗ, ಶಿಸ್ತು, ಕರುಣೆ ಮತ್ತು ಆತ್ಮಜಾಗೃತಿಯನ್ನು ಸಂಯೋಜಿಸಿ ನಿಜವಾದ ಯಶಸ್ಸು ಹೊರಗಿನ ಸಾಧನೆ ಮಾತ್ರವಲ್ಲ. ಅದು ಆಂತರಿಕ ಸಮತೋಲನವಾಗಿದೆ ಎಂದು ಡಾ.ಯೋಗಿನಿ ಕಾಲೀಜಿ ತಿಳಿಸಿದರು.
ಮಾನವ ಕುಲ ಮಹತ್ವದ ತಿರುವಿನಲ್ಲಿದೆ. ಒಳಗಿನ ಜಗತ್ತು ಶಾಂತವಾದಾಗ ಮಾತ್ರ ಹೊರಗಿನ ಜಗತ್ತು ಶಾಂತವಾಗುತ್ತದೆ. ಯೋಗ ಕೇವಲ ವ್ಯಾಯಾಮವಲ್ಲ ಅದು ಜಾಗೃತಿ. ಕರುಣೆ ಮತ್ತು ವಿಶ್ವಾಸಾರ್ಹವಾದ ಮಾರ್ಗವಾಗಿದೆ. ನಾವು ಜಾಗೃತಿ, ಸರಳತೆ, ಕೃತಜ್ಞತೆಯಿಂದ ಮತ್ತು ಸರ್ವಜೀವಿಗಳ ಮೇಲಿನ ಪ್ರೀತಿಯಿಂದ ಬದುಕಬೇಕು. ಪ್ರಸ್ತುತ ಸಮಾಜ ಮೌನವಿಲ್ಲದ ವೇಗ, ಜ್ಞಾನವಿಲ್ಲದ ಮಾಹಿತಿ ಮತ್ತು ಆತ್ಮೀಯತೆಯಿಲ್ಲದ ಸಂಪರ್ಕದಿಂದ ಬಳಲುತ್ತಿದೆ. ಯೋಗವು ಆಂತರಿಕ ಸಮತೋಲನವನ್ನು ಮರುಸ್ಥಾಪಿಸುತ್ತದೆ. ನಿಯಮಿತ ಅಭ್ಯಾಸದಿಂದ ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸ್ಥಿರತೆ, ದೈಹಿಕ ಆರೋಗ್ಯ ಮತ್ತು ಆಧ್ಯಾತ್ಮಿಕ ನೆಲೆ ದೊರೆಯುತ್ತದೆ. ಶಬ್ದಕ್ಕೆ ಅಪಾರವಾದ ಪರಿವರ್ತನಾ ಶಕ್ತಿ ಇದೆ. ಪವಿತ್ರ ಸಂಗೀತ, ಮಂತ್ರ, ಭಜನೆ, ತಬಲಾ ಮತ್ತು ನಾದಯೋಗ ಮನಸ್ಸನ್ನು ಶುದ್ಧಗೊಳಿಸಿ ಉನ್ನತ ಚೇತನವನ್ನು ಜಾಗೃತಗೊಳಿಸುತ್ತದೆ. ಸಂಗೀತವೇ ಧ್ಯಾನವಾಗಬಹುದು. ಪವಿತ್ರ ನಾದದ ಮೂಲಕ ಹೃದಯ ಸಹಜವಾಗಿ ತೆರೆದುಕೊಳ್ಳುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net