ಮಾ.5ಕ್ಕೆ ಬೆಂಗಳೂರಿನಲ್ಲಿ ಬೃಹತ್ ಮುಷ್ಕರ: ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ಹೇಳಿಕೆ

ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯಸರ್ಕಾರದ ವಿರುದ್ಧ ಆಕ್ರೋಶ
  • 37 ಸಾವಿರ ಕೋಟಿ ರೂ ಬಾಕಿ
ಮಂಡ್ಯ: ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಬಾಕಿ ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಮಾ.5ಕ್ಕೆ ಬೆಂಗಳೂರಿನ ಸ್ವಾತಂತ್ರೃ ಉದ್ಯಾನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ಹೇಳಿದರು.
ನಗರದ ಪಿಡಬ್ಲುೃಡಿ ಕಚೇರಿ ಆವರಣದಲ್ಲಿ ಜಿಲ್ಲಾ ಗುತ್ತಿಗೆದಾರರ ಸಂಘದಿಂದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಫೆ.25ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಗುತ್ತಿಗೆದಾರರ ಸಭೆ ಆಯೋಜಿಸಲಾಗುವುದು. ಅಂದಿನ ಮುಷ್ಕರಕ್ಕೆ 25ಸಾವಿರ ಜನ ಗುತ್ತಿಗೆದಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಒಂದೇ ಬಾರಿ ಹಣ ನೀಡಲು ಸಾಧ್ಯವಾಗದಿದ್ದರೆ ಹಂತ ಹಂತವಾಗಿಯಾದರೂ ಬಾಕಿ ಬಿಲ್ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 37 ಸಾವಿರ ಕೋಟಿ ರೂ ಬಾಕಿ ಉಳಿಸಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಗುತ್ತಿಗೆದಾರರು ಮತ್ತು ಹಿರಿಯ ಅಧಿಕಾರಿಗಳ ಸಭೆ ಕರೆಯಲಿ. ಅಲ್ಲಿ ಎಲ್ಲ ಮಾಹಿತಿ ನೀಡಲಾಗುವುದು ಎಂದರು.
ಗುತ್ತಿಗೆದಾರರ ಕಷ್ಟಗಳನ್ನು ರಾಜ್ಯ ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ. ಮೂರು ವರ್ಷದಿಂದ ಬಾಕಿ ಬಿಲ್ ಬಿಡುಗಡೆ ಮಾಡದ ಕಾರಣ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ, ಬಡ್ಡಿ ಪಾವತಿಸಲಾಗದೆ ವಿಷ ಕುಡಿಯುವ ಸ್ಥಿತಿಗೆ ತಲುಪಿದ್ದಾರೆ. ಲೋಕೋಪಯೋಗಿ, ಜಲ ಸಂಪನ್ಮೂಲ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಗುತ್ತಿಗೆದಾರರಿಗೆ 37 ಸಾವಿರ ಕೋಟಿ ರೂ ಬಿಡುಗಡೆ ಮಾಡಬೇಕಿದೆ. ಮಂಡ್ಯ ಜಿಲ್ಲೆಯಲ್ಲೂ ಗುತ್ತಿಗೆದಾರರ 950 ಕೋಟಿ ರೂ ಬರಬೇಕಿದೆ ಎಂದು ವಿವರಿಸಿದರು.
ಜಿಲ್ಲಾ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಎಚ್.ಯತಿರಾಜು, ರಾಜ್ಯ ಸಂಘದ ನಿರ್ದೇಶಕ ಕೆ.ರವಿಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಎಂ.ನಂದಕುಮಾರ್, ಕಾರ್ಯಾಧ್ಯಕ್ಷ ಬಿ.ಸಿ.ದಿನೇಶ್, ಉಪಾಧ್ಯಕ್ಷರಾದ ಬಿ.ಎನ್.ಕೃಷ್ಣೇಗೌಡ, ಬಿ.ಎಸ್.ಗುರುಸಿದ್ದಪ್ಪ, ಕಾರ್ಯದರ್ಶಿ ಹನುಮಂತಯ್ಯ, ಖಜಾಂಚಿ ಡಿ.ಎಂ.ನಾಗರಾಜು, ಜಂಟಿ ಕಾರ್ಯದರ್ಶಿ ಜಿ.ಲಕ್ಷ್ಮೀಪತಿ, ವಿ.ಎಲ್.ಮುನಿರಾಜು, ನವೀನ್ ಗೌಡಗೆರೆ ಇತರರಿದ್ದರು.
ಇದೇ ವೇಳೆ ಗುತ್ತಿಗೆದಾರರ ಸಮಸ್ಯೆ ಚರ್ಚೆ ನಡೆಸಲಾಯಿತು. ಕ್ಲಾಸ್ 2, 3 ಮತ್ತು 4ನೇ ಗುತ್ತಿಗೆದಾರರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಜಿಎಸ್‌ಟಿಗೆ 50 ನೋಟೀಸ್ ಕೊಡುತ್ತಾರೆ. ಅದನ್ನು ಬಿಟ್ಟು ಬಿಲ್ನಲ್ಲಿಯೇ ಪಾವತಿಸಿಕೊಳ್ಳಲಿ. ಎಲ್ಒಸಿ ಕೊಡಿಸಿಕೊಡಬೇಕು. ಮೆಟಿರಿಯಲ್ ಡಂಪಿಂಗ್ ಪ್ಲಾಂಟ್ ರದ್ದುಪಡಿಸಬೇಕು. ಗುತ್ತಿಗೆದಾರರ ಮ್ಯಾನೆಜ್‌ಮೆಂಟ್ ರದ್ದು, ಪ್ಯಾಕೇಜಾ ಟೆಂಡರ್ ರದ್ದು, ಬಾಕಿ ಇರುವ ಬಿಲ್ ಕೊಡಿಸುವ ಬಗ್ಗೆ ಚರ್ಚಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net