ವಸತಿ ಶಾಲೆಗೆ ನೂತನ ಕಟ್ಟಡ ನಿರ್ಮಾಣ

ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಬೋರೆ ಗ್ರಾಮದಲ್ಲಿ ಬುಧವಾರ ಮುರಾರ್ಜಿ ದೇಸಾಯಿ ವಸತಿ ಶಾಲೆಯ(ಬಿ.ಸಿ-184) ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಭೂಮಿಪೂಜೆ ನೆರವೇರಿಸಿದರು. ಬಸವರಾಜು, ಎಸ್.ಕಾಳೇಗೌಡ, ಕೆ.ಮಂಜುಳಾ, ಚಂದ್ರ, ನಾಗೇಂದ್ರ ಇದ್ದರು.
ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಬೋರೆ ಗ್ರಾಮದಲ್ಲಿ ಬುಧವಾರ ಮುರಾರ್ಜಿ ದೇಸಾಯಿ ವಸತಿ ಶಾಲೆಯ(ಬಿ.ಸಿ-184) ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಭೂಮಿಪೂಜೆ ನೆರವೇರಿಸಿದರು. ಬಸವರಾಜು, ಎಸ್.ಕಾಳೇಗೌಡ, ಕೆ.ಮಂಜುಳಾ, ಚಂದ್ರ, ನಾಗೇಂದ್ರ ಇದ್ದರು.
Published on
ಶ್ರೀರಂಗಪಟ್ಟಣ: ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ವಂತ ಕಟ್ಟಡ ನಿರ್ಮಾಣದ ಕನಸಿಗೆ ಕೊನೆಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಕಾಮಗಾರಿ ಮಂಜೂರು ಮಾಡಿರುವುದು ಸಂತಸ ತಂದಿದೆ ಎಂದು ಕ್ಷೇತ್ರದ ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ತಾಲೂಕಿನ ಮಹದೇವಪುರ ಬೋರೆ ಗ್ರಾಮದಲ್ಲಿ ಬುಧವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಮತ್ತು ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಸಹಯೋಗದೊಂದಿಗೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ(ಬಿ.ಸಿ-184) ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ಷೇತ್ರದ ಜನರು ಬಹುಕಾಲದಿಂದ ನನ್ನ ಹಾಗೂ ನಮ್ಮ ಕುಟುಂಬದ ಮೇಲೆ ಇರಿಸಿರುವ ನಂಬಿಕೆ ಅಪಾರ. ನಿಮ್ಮೆಲ್ಲರ ಆಶೀರ್ವಾದದಿಂದ 3ನೇ ಬಾರಿ ಶಾಸಕನಾಗಿ ಆಯ್ಕೆ ಮಾಡಿ ನಮ್ಮ ರಾಜ್ಯ ಕಾಂಗ್ರೆಸ್ ಸರ್ಕಾರ ಸೆಸ್ಕ್ ಅಧ್ಯಕ್ಷನಾಗಿ ನೇಮಿಸಿ ಪ್ರಮುಖ ಕೆಲಸಗಳ ನಿರ್ವಹಿಸುವ ಜವಾಬ್ದಾರಿಯನ್ನು ಹೆಗಲಿಗೆ ನೀಡಿದೆ. ಕ್ಷೇತ್ರದಲ್ಲಿ ನನ್ನ ತಾಯಿ ಹಿಂದೆ ಅಧಿಕಾರದಲ್ಲಿದ್ದ ವೇಳೆ 2007ರಲ್ಲಿ ಪ್ರಾರಂಭವಾದ ಈ ಮುರಾರ್ಜಿ ದೇಸಾಯಿ ವಸತಿ ಶಾಲೆ ಕೆಲವೊಂದು ಸೌಲಭ್ಯದಿಂದ ವಂಚಿತವಾಗಿ ಪಟ್ಟಣದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು. ಇದರ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅಂದಿನಿಂದ ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದವು. ಆದರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಒತ್ತಾಸೆಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಕಟ್ಟಡ ನಿರ್ಮಾಣಕ್ಕೆ 22 ಕೋಟಿ ರೂ. ಮಂಜೂರು ಮಾಡಿ ಈ ದೊಡ್ಡ ಕನಸನ್ನು ಈಡೇರಿಸಿರುವುದು ಸಂತೋಷ ತಂದಿದೆ. ಈ ಸಹಕಾರಕ್ಕೆ ಕಾರಣೀಕೃತರಾಗಿ ಕಾರ್ಯನಿರ್ವಹಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳ ಪಾತ್ರ ಸ್ಮರಣೀಯ ಎಂದರು.
ಒಬ್ಬ ಜನಪ್ರತಿನಿಧಿಯಾಗಿ ಜನರ ಮೂಲ ಸೌಲಭ್ಯಗಳ ಕೂಗಿಗೆ, ಶಿಕ್ಷಣ, ಆರೋಗ್ಯ ಸೇರಿದಂತೆ ಅವರ ಕಷ್ಟದ ಸಮಯದಲ್ಲಿ ಸ್ಪಂದಿಸಿ ಆ ಸೇವೆ ಈಡೇರಿದಾಗ ಅದರಿಂದ ಸಿಗುವ ಆತ್ಮತೃಪ್ತಿ ಅವರ್ಣನೀಯ. ಈ ಕಾಮಗಾರಿಯು 2 ಬ್ಲಾಕ್‌ಗಳಲ್ಲಿ ಅಗತ್ಯ ಮೂಲ ಸೌಲಭ್ಯಗಳ ಕಲ್ಪಿಸುವ ಜತೆಗೆ 1 ಬ್ಲಾಕ್ ಕಾಮಗಾರಿಯನ್ನು 1 ವರ್ಷದ ಅವಧಿಯ ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವವರೆಗೆ ಶೀಘ್ರವಾಗಿ ಗುಣಮಟ್ಟದೊಂದಿಗೆ ನಿರ್ವಹಿಸಲು ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕ್ಷೇತ್ರದ ರೈತಾಪಿ ವರ್ಗಕ್ಕೆ ನೆರವು, ಶಿಕ್ಷಣ ಮತ್ತು ಮೂಲಭೂತ ಸೇವೆ ಕಲ್ಪಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನನಗೆ ನೀಡಿರುವ ಶಕ್ತಿ ಮತ್ತು ಸಹಕಾರ ಮಹತ್ವದ್ದು. ಇತ್ತೀಚಿನ ದಿನಗಳಲ್ಲಿ ಮಹದೇವಪುರ ವ್ಯಾಪ್ತಿಯಲ್ಲಿ ಎದುರಾಗುತ್ತಿರುವ ವಿದ್ಯುತ್ ಸಮಸ್ಯೆ, ಸಣ್ಣ-ಪುಟ್ಟ ವ್ಯತ್ಯಾಸ ನಿವಾರಿಸಲು ಕೆಪಿಟಿಸಿಎಲ್ ಎಂಡಿ ಹಾಗೂ ಸೆಸ್ಕ್‌ನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ಗುಪ್ತಾ ಅವರೊಂದಿಗೆ ಚರ್ಚಿಸಿದ್ದು, ತೂಬಿನಕೆರೆ ಕೈಗಾರಿಕಾ ವಲಯದಲ್ಲಿನ ಮಾದರಿ ಮೈಸೂರಿನಿಂದ-ತರಿಪುರ ಉಪಕೇಂದ್ರದವರೆಗೂ ಲಿಂಕ್ ಲೈನ್ ಸ್ಥಾಪಿಸಿ ವಿದ್ಯುತ್ ವ್ಯತ್ಯಯವಾದ ವೇಳೆ ಅದನ್ನು ಸರಿದೂಗಿಸಲು ಕಾಮಗಾರಿ ನಡೆಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದು, ಶೀಘ್ರ ಯೋಜನೆ ಜಾರಿಯಾಗಲಿದೆ ಎಂದರು.
ಬಹಳ ವರ್ಷಗಳ ನಂತರ ಬಿರುಬೇಸಿಗೆಯ ಸಮಯದಲ್ಲೂ ನೀರು ಮತ್ತು ಇತರ ಸೌಲಭ್ಯಗಳಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಈ ವ್ಯವಸ್ಥೆಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸುಸಜ್ಜಿತವಾಗಿ ನಿರ್ವಹಿಸಬೇಕು ಎಂದರು.
ಗ್ರಾಮದ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಸವರಾಜು, ಭೂ ನ್ಯಾಯ ಮಂಡಳಿ ಸದಸ್ಯ ಎಸ್.ಕಾಳೇಗೌಡ, ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಕೆ.ಮಂಜುಳಾ, ತಾಪಂ ಇಒ ಚಂದ್ರ, ತಾಲೂಕು ಕಲ್ಯಾಣಾಧಿಕಾರಿ ಸುನೀತ ಗುಳ್ಳಪ್ಪನವರ್, ನೀರು ಸರಬರಾಜು ಇಲಾಖೆಯ ಎಇಇ ಸೌಮ್ಯಾ, ಜಿಲ್ಲಾ ಸಮನ್ವಯಾಧಿಕಾರಿ ಅಭಿಲಾಷ್, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಎಚ್.ಎಂ.ಮುರಳೀಧರ್, ಪಿಡಿಒ ನಾಗೇಂದ್ರ, ಪಿಎಸ್‌ಐ ವಿನೋದ್ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net