ಡೆಕಾಯ್ ತನಿಖಾ ತಂಡಕ್ಕೆ ಸನ್ಮಾನ: ಜಿಪಂ ಸಿಇಒ ಕೆ.ಆರ್.ನಂದಿನಿ ಮೆಚ್ಚುಗೆ

 ಮಂಡ್ಯ ನಗರದ ಗುತ್ತಲಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಡೆಕಾಯ್ ತನಿಖಾ ತಂಡವನ್ನು ಅಭಿನಂದಿಸಲಾಯಿತು.
ಮಂಡ್ಯ ನಗರದ ಗುತ್ತಲಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಡೆಕಾಯ್ ತನಿಖಾ ತಂಡವನ್ನು ಅಭಿನಂದಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಗುತ್ತಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಯೋಜನೆ
  • ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಭಾಗಿ

ಮಂಡ್ಯ:

ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ಭ್ರೂಣ ಪತ್ತೆ ಮಾಡುತ್ತಿದ್ದ ಜಾಲ ಬಯಲಿಗೆಳೆದ ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಅಭಿನಂದಿಸುವ ಜತೆಗೆ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಡ್ಯ ಮೂಲದ ಏಜೆಂಟ್ ಭ್ರೂಣ ಪತ್ತೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಭ್ರೂಣ ಪತ್ತೆ ಜಾಲ ಹಿಡಿಯಲು ಬಳಸಿದ್ದ ಡೆಕಾಯ್ ಹೆಸರಲ್ಲಿ ತನಿಖೆ ಮಾಡಲಾಗಿತ್ತು. ಅದೇ ಮಾದರಿಯನ್ನು ಈ ಪ್ರಕರಣದಲ್ಲಿಯೂ ಅನುಸರಿಸಲಾಗಿತ್ತು. ಅದರಂತೆ ಚಿಂತಾಮಣಿಯಲ್ಲಿ ಭ್ರೂಣ ಪತ್ತೆ ಮಾಡುತ್ತಿದ್ದ ಜಾಲವನ್ನು ಬಯಲಿಗೆಳೆಯಲಾಗಿತ್ತು. ಈ ಸಂಬಂಧ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಗುತ್ತಲು ಬಡಾವಣೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಡೆಕಾಯ್ ತಂಡದಲ್ಲಿದ್ದವರನ್ನು ಸನ್ಮಾನಿಸಲಾಯಿತು.
ತಂಡದಲ್ಲಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಸಿ.ಬೆಟ್ಟಸ್ವಾಮಿ, ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಕೇಶವ, ಆರೋಗ್ಯ ಶಿಕ್ಷಣಾಧಿಕಾರಿ ಮಂಗಳಾ, ಫಾರ್ಮಸಿಸ್ಟ್ ನಿಶ್ಚಿತಾ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಪುಟ್ಟಸಿದ್ದಮ್ಮ, ನಗರ ಕಾರ್ಯಕ್ರಮ ವ್ಯವಸ್ಥಾಪಕ ಮನು ಹಾಗೂ ಜಿಲ್ಲಾ ಸಲಹೆಗಾರ ಎಚ್.ಬಿ.ಮಂಜೇಗೌಡ ಅವರನ್ನು ಸಿಇಒ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಸಿ.ಗೀತಾಲಕ್ಷ್ಮೀ, ಜಿಲ್ಲಾ ಕ್ಷಯ ರೋಗ ಹಾಗೂ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಂ.ಎನ್.ಆಶಾಲತಾ, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ಜವರೇಗೌಡ ಇತರರಿದ್ದರು.

ತಾಯಿಯ ಹಾಲೇ ಮಗುವಿಗೆ ನೈಸರ್ಗಿಕ ಲಸಿಕೆ
ಜಿಪಂ ಸಿಇಒ ಕೆ.ಆರ್.ನಂದಿನಿ ಹೇಳಿಕೆ
ತಾಯಿಯ ಹಾಲು ಮಗುವಿನ ಮೊದಲ ಮತ್ತು ಅತ್ಯುತ್ತಮ ಆಹಾರ. ಮಗು ಜನನವಾದ ಮೊದಲ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭಿಸುವ ಜತೆಗೆ ಮೊದಲ ಆರು ತಿಂಗಳು ನೀಡುವುದರಿಂದ ಆರೋಗ್ಯ, ಬೆಳವಣಿಗೆ ಹಾಗೂ ರೋಗನಿರೋಧಕ ಶಕ್ತಿಗೆ ಅತ್ಯಂತ ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ವರ್ಷದ ಘೋಷವಾಕ್ಯ ಸುಸ್ಥಿರ ಜೀವನದ ಭದ್ರ ಅಡಿಪಾಯಕ್ಕಾಗಿ ಸ್ತನ್ಯಪಾನ ಪರಿಣಾಮಕಾರಿ ವಿಧಾನಗಳನ್ನು ಸದೃಢಗೊಳಿಸೋಣ ಎಂಬುದಾಗಿದ್ದು, ತಾಯಿಯ ಹಾಲಿನ ಮಹತ್ವದ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ಜನನದ ನಂತರ ಮೊದಲ ಒಂದು ಗಂಟೆಯೊಳಗೆ ಶಿಶುವಿಗೆ ತಾಯಿಯ ಹಾಲುಣಿಸುವುದು ಅತ್ಯಗತ್ಯ. ಮೊದಲ ಆರು ತಿಂಗಳವರೆಗೆ ಕೇವಲ ತಾಯಿಯ ಹಾಲನ್ನೇ ನೀಡಬೇಕು. ನಂತರ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಪೂರಕ ಆಹಾರದೊಂದಿಗೆ ಸ್ತನ್ಯಪಾನ ಮುಂದುವರಿಸುವುದರಿಂದ ಮಗುವಿನ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಸ್ತನ್ಯಪಾನವು ಮಗುವಿನ ಆರೋಗ್ಯ ರಕ್ಷಣೆಯ ಜತೆಗೆ ತಾಯಿಯ ಆರೋಗ್ಯಕ್ಕೂ ಬಹಳಷ್ಟು ಪ್ರಯೋಜನಕಾರಿಯಾಗಿದೆ. ತಾಯಿ ಮತ್ತು ಮಗುವಿನ ನಡುವಿನ ಭಾವನಾತ್ಮಕ ಬಾಂಧವ್ಯವನ್ನು ಬಲಪಡಿಸುವುದರೊಂದಿಗೆ ಕೆಲವು ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ ಎಂದು ಹೇಳಿದರು.
ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಒಟ್ಟು 14,464 ಹೆರಿಗೆ ಆಗಿದೆ. ಎಲ್ಲವೂ ಸಾಂಸ್ಥಿಕ ಹೆರಿಗೆಗಳಾಗಿವೆ. ಈ ಪೈಕಿ 14,438 ಸಜೀವ ಜನನ ದಾಖಲಾಗಿದ್ದು, ಜನಿಸಿದ ಎಲ್ಲ ಶಿಶುಗಳಿಗೆ ಮೊದಲ ಒಂದು ಗಂಟೆಯೊಳಗೆ ತಾಯಿಯ ಎದೆಹಾಲುಣಿಸುವ ಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಜಿಲ್ಲೆಯಲ್ಲಿ ಮಿಲ್ಕ್ ಬ್ಯಾಂಕ್ ಸಹ ಸ್ಥಾಪಿಸಲಾಗಿದ್ದು, ಅಗತ್ಯವಿರುವ ನವಜಾತ ಶಿಶುಗಳಿಗೆ ನೆರವಾಗುತ್ತಿದೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಎಎನ್‌ಎಂಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ ಸ್ತನ್ಯಪಾನದ ಮಹತ್ವದ ಕುರಿತು ನಿರಂತರ ಜಾಗೃತಿ ಮೂಡಿಸುತ್ತಿದ್ದಾರೆ. ಆರೋಗ್ಯವಂತ ಮಕ್ಕಳ ನಿರ್ಮಾಣದಲ್ಲಿ ಕುಟುಂಬದ ಸದಸ್ಯರು, ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ತಾಯಂದಿರಿಗೆ ಅಗತ್ಯವಾದ ಬೆಂಬಲ ಮತ್ತು ಪ್ರೋತ್ಸಾಹ ನೀಡಬೇಕು. ಸ್ತನ್ಯಪಾನವನ್ನು ಕುಟುಂಬ ಹಾಗೂ ಸಮಾಜದ ಜವಾಬ್ದಾರಿಯನ್ನಾಗಿ ಪರಿಗಣಿಸಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net