ನೀಟ್ ಪ್ರಶ್ನೆಪತ್ರಿಕೆ ಅಕ್ರಮ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆಸಿರುವ ದೌರ್ಜನ್ಯ ಖಂಡಿಸಿ ಮಳವಳ್ಳಿ ಪಟ್ಟಣದಲ್ಲಿ ಶನಿವಾರ ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು. ಎಂ.ಎನ್.ಜಯರಾಜು, ದೊಡ್ಡಯ್ಯ, ಗಂಗರಾಜು ಅರಸ್, ಪ್ರೊ ರಂಗಸ್ವಾಮಿ, ಡಾ. ಎಂ ಆರ್ ಪ್ರಸಾದ್, ಸಾಹಿತಿ ಬಸಪ್ಪ ನೆಲಮಾಕನಹಳ್ಳಿ, ಅಖಿಲ್, ಶಂಕರ್ ಇದ್ದರು.
ಮಳವಳ್ಳಿ: ನೀಟ್ ಪ್ರಶ್ನೆಪತ್ರಿಕೆ ಅಕ್ರಮ ಹಗರಣವನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿ ದೌರ್ಜನ್ಯ ನಡೆಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಪಟ್ಟಣದಲ್ಲಿ ಶನಿವಾರ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಪಟ್ಟಣದ ಅನಂತರಾಮ್ ವೃತ್ತದಲ್ಲಿ ನೆರೆದ ಸಂಘಟನೆಗಳ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿ.ಪಂ. ಮಾಜಿ ಸದಸ್ಯ ಎಂ.ಎನ್. ಜಯರಾಜು ಮಾತನಾಡಿ, ಇಡೀ ದೇಶದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನೇ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿರುವ ಕೇಂದ್ರ ಸರ್ಕಾರ ವೈಫಲ್ಯದಿಂದ ಇಪ್ಪತ್ತಕ್ಕೂ ಹೆಚ್ಚು ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಈ ಹಗರಣದಿಂದ ವಿದ್ಯಾರ್ಥಿ ಸಮೂಹ ರೊಚ್ಚಿಗೆದ್ದು ಹೋರಾಟಕ್ಕೆ ಇಳಿದ ಪರಿಣಾಮ ದೇಶದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದ್ದು ಇದನ್ನು ಹತ್ತಿಕ್ಕಲು ಪ್ರತಿಭಟನಾ ನಿರತರ ಮೇಲೆ ಲಾಠಿ ಚಾರ್ಜ್ ಮಾಡಿ ಅಮಾನವೀಯವಾಗಿ ನಡೆದಿಕೊಂಡಿರುವ ಸರ್ಕಾರದ ನಡೆ ಖಂಡನೀಯ ಎಂದರು.
ವಿದ್ಯಾರ್ಥಿಗಳ ದೌರ್ಜನ್ಯ ನಡೆಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ದೊಡ್ಡಯ್ಯ, ಗಂಗರಾಜು ಅರಸ್, ಪ್ರೊ. ರಂಗಸ್ವಾಮಿ, ಡಾ. ಎಂ.ಆರ್. ಪ್ರಸಾದ್, ಸಾಹಿತಿ ಬಸಪ್ಪ ನೆಲಮಾಕನಹಳ್ಳಿ, ಅಖಿಲ್, ಶಂಕರ್ ಇತರರು ಇದ್ದರು.