ಸಿಎಂ ಡಿಕೆಶಿ ಬಂಗಾರಪ್ಪ, ಎಸ್‌ಎಂಕೆ ರೀತಿ ನಿರ್ಣಯ ಕೈಗೊಳ್ಳಲಿ
ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಿ ತಡೆದು ಪ್ರತಿಭಟನೆ ನಡೆಸಿದರು. ನೀಲನಹಳ್ಳಿ ಧನಂಜಯ, ಮಂಗಳಾ ನವೀನ್ ಇತರರು ಇದ್ದರು.
ಪಾಂಡವಪುರ: ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶ ಖಂಡಿಸಿ ಬಿಜೆಪಿ ಕಾರ್ಯಕರ್ತರು ಶ್ರೀರಂಗಪಟ್ಟಣ ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಐದು ದೀಪದ ವೃತ್ತದಲ್ಲಿ ಜಮಾಹಿಸಿದ ಬಿಜೆಪಿ ಕಾರ್ಯಕರ್ತರು ಶ್ರೀರಂಗಪಟ್ಟಣ-ಜೇವರ್ಗಿ ಮುಖ್ಯರಸ್ತೆಯನ್ನು ತಡೆದು ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಮೊಳಗಿಸಿ ಆಕ್ರೋಶ ಹೊರಹಾಕಿದರು.
ಬರಗಾಲದ ಸಂದರ್ಭದಲ್ಲಿ ಕೆಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿರುವುದು ರೈತರಿಗೆ ಮರಣ ಶಾಸನ ಬರೆದಂತಾಗಿದೆ. ರಾಜ್ಯ ಸರ್ಕಾರ ರಾಜ್ಯದಲ್ಲಿನ ಬರಗಾಲದ ಸನ್ನಿವೇಶವನ್ನು ಪ್ರಾಧಿಕಾರ ಮುಂದೆ ಮಂಡಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದರಿಂದಾಗಿ ಪ್ರಾಧಿಕಾರ ಈ ರೀತಿಯ ಆದೇಶವನ್ನು ನೀಡಿದೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮಿಳುನಾಡಿಗೆ ನೀರು ಹರಿಸದಿರಲು ದೃಢ ನಿರ್ಧಾರ ಮಾಡುವ ಮೂಲಕ ರೈತರ ಹಿತಕಾಯುವ ಕೆಲಸ ಮಾಡಬೇಕು. ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರೊಂದಿಗೆ ಚರ್ಚೆಗೆ ಮುಂದಾಗಿರುವುದು ಸರಿಯಲ್ಲ. ಬಂಗಾರಪ್ಪ, ಎಸ್.ಎಂ.ಕೃಷ್ಣ ಅವರು ತೆಗೆದುಕೊಂಡ ನಿರ್ಣಯ ಮಾದರಿಯಲ್ಲಿ ನೀವು ನಿರ್ಣಯ ತೆಗೆದುಕೊಳ್ಳಬೇಕು. ಒಂದು ವೇಳೆ ಪ್ರಾಧಿಕಾರದ ಆದೇಶಕ್ಕೆ ಒಪ್ಪಿ ನೀರು ಹರಿಸಲು ಮುಂದಾದರೆ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಗಳನವೀನ್, ತಾಲೂಕು ಅಧ್ಯಕ್ಷ ಧನಂಜಯ್, ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಮುಖಂಡರಾದ ಎಸ್.ಎನ್.ಟಿ. ಸೋಮಶೇಖರ್, ಮಂಜುನಾಥ್, ನವೀನ, ಚನ್ನೇಗೌಡ, ಆನಂದ್, ಅಶೋಕ್, ಶ್ರೀನಿವಾಸನಾಯಕ, ರಾಮಚಂದ್ರು, ಮಂಜಾಚಾರಿ ಸೇರಿದಂತೆ ಇತರರು ಇದ್ದರು.