ಕೋಟಹಳ್ಳಿಯಲ್ಲಿ ಚಂದಮಾಮನ ಮದುವೆ

ಮಳೆರಾಯನನ್ನು ಒಲಿಸಲು ಜನಪದ ಆಚರಣೆ
ಕಿಕ್ಕೇರಿ
ಕಿಕ್ಕೇರಿ ಹೋಬಳಿಯ ಕೋಟಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಮಳೆರಾಯನನ್ನು ಒಲಿಸಲು ಜನಪದರ ನಂಬಿಕೆಯಂತೆ ಗಂಡುಮಕ್ಕಳಿಬ್ಬರಿಗೆ ಚಂದಮಾಮನ ಮದುವೆ ನೆರವೇರಿಸಲಾಯಿತು.ಕಿಕ್ಕೇರಿ
Published on: 

ಕಿಕ್ಕೇರಿ: ಹೋಬಳಿಯ ಕೋಟಹಳ್ಳಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗಂಡು ಮಕ್ಕಳಿಬ್ಬರಿಗೆ ಚಂದಮಾಮನ ಮದುವೆ ಮಾಡುವ ವಿಶಿಷ್ಟ ಸಂಪ್ರದಾಯ ಆಚರಿಸಲಾಯಿತು.

ಗ್ರಾಮದ ಮಕ್ಕಳನ್ನು ಒಂದೆಡೆ ಕಲೆ ಹಾಕಿ ವರ ಹಾಗೂ ವಧುವಾಗಿ ಇಬ್ಬರು ಗಂಡು ಮಕ್ಕಳನ್ನೇ ಆಯ್ಕೆ ಮಾಡಲಾಯಿತು. ಗ್ರಾಮದ ಹಿರಿಯರು ಮದುವೆ ಸಂಪ್ರದಾಯದಂತೆ ವರ, ವಧುವಿನ ಉಡುಪು ತೊಡಿಸಿ ಪೂಜೆ ನೆರವೇರಿಸಿದರು. ಬಳಿಕ ಗ್ರಾಮದ ಪ್ರಮುಖ ಬೀದಿಯಲ್ಲಿ ಬಿಜುಗಿನ ಪೆಟ್ಟಿಗೆಯೊಂದಿಗೆ ವಧು, ವರನನ್ನು ಮೆರವಣಿಗೆ ಮಾಡಲಾಯಿತು.

ರಾಗಿ ರೊಟ್ಟಿ, ಸಿಹಿ ಹೋಳಿಗೆ: ಮದುವೆಗೆ ಮುನ್ನ ಮೂರು ದಿನಗಳವರೆಗೆ ಮನೆ ಮನೆಗಳಿಗೆ ತೆರಳಿ ಮಕ್ಕಳು ರಾಗಿ ಹಿಟ್ಟನ್ನು ತಂದು ಒಂದೆಡೆ ಕಲೆಹಾಕಿ ರೊಟ್ಟಿ ತಯಾರಿಸಿದರು. 4-5 ದಿನಗಳ ಕಾಲ ಜರುಗಿದ ಮದುವೆ ಶಾಸ್ತ್ರದಲ್ಲಿ ದಿನಕ್ಕೊಂದು ರೊಟ್ಟಿ, ಸಿಹಿ ಹೋಳಿಗೆ ತಯಾರಿಸಲಾಯಿತು.

ರೊಟ್ಟಿಯ ಮೇಲೆ ಚಂದಿರನ ಚಿತ್ತಾರ ಬಿಡಿಸಿದ ಮಕ್ಕಳು ಪರಸ್ಪರ ರೊಟ್ಟಿ ಕಸಿಯುವ ಸಾಂಪ್ರದಾಯಿಕ ಆಟವಾಡಿದರು. ಅಂತಿಮವಾಗಿ ಒಂದೆಡೆ ಸೇರಿ ಮಳೆರಾಯನ ಕುರಿತು ಜಾನಪದ ಹಾಡುಗಳನ್ನು ಹಾಡಿಸಂಭ್ರಮಿಸಿದರು. ಊರಿನ ಗ್ರಾಮಸ್ಥರು ಇದಕ್ಕೆ ಸಾಥ್ ನೀಡಿದರು. ಪದ್ಮಮ್ಮ, ಯಶೋದಾ, ಶ್ರತಿ, ರಾಧಮ್ಮ, ರೇಣುಕಾ, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net