ಸಿರಿಧಾನ್ಯದಿಂದ ಉತ್ತಮ ಆದಾಯ: ಕೃಷಿ ವಿವಿಯ ಶಿಕ್ಷಣ ನಿರ್ದೇಶಕ ಡಾ.ಎನ್.ಶಿವಕುಮಾರ್ ಸಲಹೆ

ಮಂಡ್ಯ ತಾಲೂಕು ವಿ.ಸಿ ಫಾರಂನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸಿರಿಧಾನ್ಯ ಬೆಳೆಗಳ ಪ್ರಾತ್ಯಕ್ಷಿಕೆ ನಡೆಯಿತು.
ಮಂಡ್ಯ ತಾಲೂಕು ವಿ.ಸಿ ಫಾರಂನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸಿರಿಧಾನ್ಯ ಬೆಳೆಗಳ ಪ್ರಾತ್ಯಕ್ಷಿಕೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ವಿ.ಸಿ ಫಾರಂನಲ್ಲಿ ಜಿಲ್ಲಾಮಟ್ಟದ ಸಿರಿಧಾನ್ಯ ಬೆಳೆಗಳ ವಿಚಾರ ಸಂಕಿರಣ
  • ವಿವಿಧ ಭಾಗಗಳಿಂದ ಆಗಮಿಸಿದ್ದ 120ಕ್ಕೂ ಅಧಿಕ ರೈತರು ಭಾಗಿ

ಮಂಡ್ಯ:

ಸಿರಿಧಾನ್ಯಗಳು ಇಂದಿನ ಪೀಳಿಗೆಯ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ ಆಹಾರ ಬೆಳೆ. ಅಂತೆಯೇ ರೈತರು ವೈಜ್ಞಾನಿಕ ಹಾಗೂ ಸುಧಾರಿತ ಕೃಷಿ ಪದ್ಧತಿ ಅಳವಡಿಸಿಕೊಂಡು ಸಿರಿಧಾನ್ಯ ಬೆಳೆದರೆ ಉತ್ತಮ ಇಳುವರಿ ಜತೆಗೆ ಹೆಚ್ಚಿನ ಆದಾಯ ಪಡೆಯಬಹುದು ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ.ಎನ್.ಶಿವಕುಮಾರ್ ಹೇಳಿದರು.

ತಾಲೂಕಿನ ವಿ.ಸಿ ಫಾರಂನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆ(ಕಿರುಧಾನ್ಯ) ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸಿರಿಧಾನ್ಯ ಬೆಳೆಗಳ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಸಿರಿಧಾನ್ಯಗಳು ಹಿಂದಿನ ಕಾಲದಲ್ಲಿ ಗ್ರಾಮೀಣ ಜನರ ಪ್ರಮುಖ ಆಹಾರದ ಭಾಗವಾಗಿದ್ದವು. ಇದೀಗ ಆರೋಗ್ಯದ ಮಹತ್ವದಿಂದಾಗಿ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿಯೂ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿವೆ. ಮಧುಮೇಹ, ಅತಿಸ್ಥೂಲತೆ ಸೇರಿದಂತೆ ಜೀವನಶೈಲಿ ಸಂಬಂಧಿತ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳ ಬಳಕೆಯತ್ತ ಜನರು ಹೆಚ್ಚಿನ ಒಲವು ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿರಿಧಾನ್ಯಗಳಿಗೆ ಉತ್ತಮ ಮಾರುಕಟ್ಟೆ ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ತಿಳಿಸಿದರು.
ಜಿಲ್ಲೆಯ ಕೃಷಿ ಪರಿಸ್ಥಿತಿಗೆ ಅನುಗುಣವಾಗಿ ಬೆಳೆ ವೈವಿಧ್ಯೀಕರಣಕ್ಕೆ ರೈತರು ಮುಂದಾಗಬೇಕು. ಏಕ ಬೆಳೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡು ಸಿರಿಧಾನ್ಯ ಸೇರಿದಂತೆ ವಿವಿಧ ಬೆಳೆ ಬೆಳೆಸುವುದರಿಂದ ಹವಾಮಾನ ಬದಲಾವಣೆಯಿಂದ ಉಂಟಾಗುವ ಅಪಾಯ ತಗ್ಗಿಸಬಹುದು. ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆಯಿಂದ ದೊರೆಯುವ ತಾಂತ್ರಿಕ ಮಾರ್ಗದರ್ಶನ ಮತ್ತು ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಸ್ತರಣಾ ನಿರ್ದೇಶಕ ಡಾ.ಸಿ.ರಾಮಚಂದ್ರ ಮಾತನಾಡಿ, ಹವಾಮಾನ ಬದಲಾವಣೆ, ಕೃಷಿ ವೆಚ್ಚದ ಏರಿಕೆ ಹಾಗೂ ನೀರಿನ ಲಭ್ಯತೆಯಲ್ಲಿನ ವ್ಯತ್ಯಾಸಗಳ ಹಿನ್ನೆಲೆಯಲ್ಲಿ ಸಿರಿಧಾನ್ಯ ಬೆಳೆಗಳ ಕುರಿತು ಇಂತಹ ವಿಚಾರ ಸಂಕಿರಣಗಳು ಅತ್ಯಂತ ಪ್ರಸ್ತುತವಾಗಿವೆ. ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿರುವುದು ಸಂತಸದ ಸಂಗತಿ. ಸಂಶೋಧನಾ ಸಂಸ್ಥೆಗಳಲ್ಲಿ ಅಭಿವೃದ್ಧಿಪಡಿಸಲಾಗಿರುವ ತಂತ್ರಜ್ಞಾನಗಳು ರೈತರ ಹೊಲಗಳಿಗೆ ತಲುಪಬೇಕು. ಆಗ ಮಾತ್ರ ಸಂಶೋಧನೆಯ ನಿಜವಾದ ಉದ್ದೇಶ ಸಾರ್ಥಕವಾಗುತ್ತದೆ. ವಿಜ್ಞಾನಿಗಳು ಮತ್ತು ರೈತರು ಪರಸ್ಪರ ಅನುಭವ ಹಂಚಿಕೊಳ್ಳುವ ಇಂತಹ ಕಾರ್ಯಕ್ರಮಗಳು ಕೃಷಿಯ ಪ್ರಗತಿಗೆ ಸಹಕಾರಿಯಾಗುತ್ತವೆ ಎಂದರು.
ಸಹ ಸಂಶೋಧನಾ ನಿರ್ದೇಶಕ ಡಾ.ಬಿ.ಮಹಾದೇವು ಮಾತನಾಡಿ, ರೈತರು ಸಾಂಪ್ರದಾಯಿಕ ಏಕಬೆಳೆ ಪದ್ಧತಿಯಿಂದ ಹೊರಬಂದು ಸಿರಿಧಾನ್ಯಗಳನ್ನು ತಮ್ಮ ಕೃಷಿ ಪದ್ಧತಿಯ ಭಾಗವನ್ನಾಗಿ ಮಾಡಿಕೊಳ್ಳಬೇಕು. ಸಿರಿಧಾನ್ಯಗಳು ಕಡಿಮೆ ನೀರಿನಲ್ಲಿಯೂ ಬೆಳೆಯಬಲ್ಲ ಬೆಳೆ. ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯಲ್ಲಿ ರೈತರಿಗೆ ಸೂಕ್ತ ಪರ್ಯಾಯ ಬೆಳೆಗಳಾಗಿವೆ ಎಂದರು.
ಹಿರಿಯ ವಿಜ್ಞಾನಿ ಡಾ.ಕಮಲಾಬಾಯಿ ಕೂಡಗಿ ಮಾತನಾಡಿ, ಸಿರಿಧಾನ್ಯಗಳನ್ನು ಕೇವಲ ಕಚ್ಚಾ ಉತ್ಪನ್ನವಾಗಿ ಮಾರಾಟ ಮಾಡುವ ಬದಲು ಸಂಸ್ಕರಿಸಿ ಮೌಲ್ಯವರ್ಧಿತ ಉತ್ಪನ್ನಗಳಾಗಿ ರೂಪಿಸುವುದರಿಂದ ರೈತರ ಆದಾಯ ಹೆಚ್ಚಿಸಬಹುದು ಎಂದು ಸಲಹೆ ನೀಡಿದರು.
ವಿಜ್ಞಾನಿಗಳಾದ ಡಾ.ಅತೀಫಾ ಮುನವಾರಿ ಜಿಲ್ಲೆಯ ಹವಾಮಾನ ಮಾಹಿತಿ ಹಾಗೂ ಮಣ್ಣು ಪರೀಕ್ಷೆಯ ಮಹತ್ವ ಕುರಿತು, ಡಾ.ಎಂ. ಭವ್ಯಾ ಅವರು ಬದಲಾದ ಹವಾಮಾನ ಪರಿಸ್ಥಿತಿಯಲ್ಲಿ ಮಂಡ್ಯ ಜಿಲ್ಲೆಗೆ ಪರ್ಯಾಯ ಬೆಳೆ ಪದ್ಧತಿಗಳು ಕುರಿತು, ಡಾ.ಸಿ.ಎಂ.ಸುನಿಲ್ ಅವರು ಸಿರಿಧಾನ್ಯ ಬೆಳೆಗಳ ಸುಧಾರಿತ ಬೇಸಾಯ ಕ್ರಮ, ಡಾ.ಎಚ್.ಆರ್.ರವೀಂದ್ರ ಸಿರಿಧಾನ್ಯ ಬೆಳೆಗಳಲ್ಲಿ ಸಮಗ್ರ ರೋಗ ನಿರ್ವಹಣೆ ಕುರಿತು ಹಾಗೂ ಡಾ.ಆರ್.ದರ್ಶನ್ ಸಿರಿಧಾನ್ಯ ಬೆಳೆಗಳಲ್ಲಿ ಸಮಗ್ರ ಕೀಟ ನಿರ್ವಹಣೆ ಬಗ್ಗೆ ಮತ್ತು ಡಾ.ಡಿ.ಕೆ.ಸುರೇಶ್ ಅವರು ಸಿರಿಧಾನ್ಯಗಳ ಮಾರುಕಟ್ಟೆ ಅವಕಾಶಗಳ ಕುರಿತು ಮಾಹಿತಿ ನೀಡಿದರು.
ವಿಚಾರ ಸಂಕಿರಣದಲ್ಲಿ ರೈತರಿಗೆ ಸಿರಿಧಾನ್ಯ ಕೃಷಿಯ ವಿವಿಧ ಆಯಾಮಗಳ ಕುರಿತು ತಜ್ಞರಿಂದ ಸಮಗ್ರ ಮಾಹಿತಿ ನೀಡಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ 120ಕ್ಕೂ ಅಧಿಕ ರೈತರು ಭಾಗವಹಿಸಿದ್ದರು. ಸಿರಿಧಾನ್ಯಗಳ ಉತ್ಪಾದನೆಯಿಂದ ಹಿಡಿದು ಮೌಲ್ಯವರ್ಧನೆ ಮತ್ತು ಮಾರುಕಟ್ಟೆಯವರೆಗೆ ರೈತರಿಗೆ ಸಮಗ್ರ ಮಾಹಿತಿ ಒದಗಿಸುವುದರ ಜತೆಗೆ ರೈತರು ಮತ್ತು ವಿಜ್ಞಾನಿಗಳ ನಡುವೆ ನೇರ ಸಂವಾದಕ್ಕೆ ಉತ್ತಮ ವೇದಿಕೆಯಾಯಿತು

1.10 ಎಕರೆಯಲ್ಲಿ 28 ಕ್ವಿಂಟಾಲ್ ರಾಗಿ
ವಿಚಾರ ಸಂಕಿರಣದಲ್ಲಿ ತಮ್ಮ ಕೃಷಿ ಅನುಭವವನ್ನು ಹಂಚಿಕೊಂಡ ಕೆರಗೋಡು ಗ್ರಾಮದ ಪ್ರಗತಿಪರ ರೈತ ಶಿವಲಿಂಗೇಗೌಡ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಪಡೆದ ತಾಂತ್ರಿಕ ಮಾರ್ಗದರ್ಶನವನ್ನು ತಮ್ಮ ಹೊಲದಲ್ಲಿ ಅಳವಡಿಸಿಕೊಂಡು ಕೆಎಂಆರ್-316 ರಾಗಿ ತಳಿಯನ್ನು 1 ಎಕರೆ 10 ಗುಂಟೆ ಪ್ರದೇಶದಲ್ಲಿ ಬೆಳೆಸಿ 28 ಕ್ವಿಂಟಾಲ್ ಇಳುವರಿ ಪಡೆದಿರುವುದಾಗಿ ತಿಳಿಸಿದರು.
ರಾಗಿ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಕೇವಲ ಉತ್ತಮ ತಳಿ ಆಯ್ಕೆ ಮಾಡುವುದು ಸಾಕಾಗುವುದಿಲ್ಲ. ಭೂಮಿ ಸಿದ್ಧತೆ, ಸರಿಯಾದ ಸಮಯದಲ್ಲಿ ಬಿತ್ತನೆ, ಬೀಜದ ಪ್ರಮಾಣ, ಸಮತೋಲನದ ಪೋಷಕಾಂಶ ನಿರ್ವಹಣೆ, ಕಳೆ ನಿಯಂತ್ರಣ, ರೋಗಕೀಟಗಳ ನಿರ್ವಹಣೆ ಹಾಗೂ ಸೂಕ್ತ ಸಮಯದಲ್ಲಿ ಕೊಯ್ಲು ಮಾಡುವುದು ಬಹಳ ಮುಖ್ಯ. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಲಹೆಗಳನ್ನು ಹಂತ ಹಂತವಾಗಿ ಅನುಸರಿಸಿದರಿಂದಾಗಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net