ಅ.11ರಿಂದ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾಹಿತಿ ! cauvery arathi

ಶ್ರೀರಂಗಪಟ್ಟಣ ದಸರಾ ಅಂಗವಾಗಿ ಕೆಆರ್‌ಎಸ್‌ನಲ್ಲಿ ಅ.11ರಿಂದ ಸಂಪ್ರದಾಯಬದ್ಧ ಕಾವೇರಿ ಆರತಿ ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ
cauvery arathi
ಬೆಂಗಳೂರಿನ ವಿಕಾಸಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಕಾವೇರಿ ಆರತಿ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
Published on

ಮಂಡ್ಯ: ಶ್ರೀರಂಗಪಟ್ಟಣ ದಸರಾ ಅಂಗವಾಗಿ ಕೆಆರ್‌ಎಸ್‌ನಲ್ಲಿ ಅ.11ರಿಂದ ಸಂಪ್ರದಾಯಬದ್ಧ ಕಾವೇರಿ ಆರತಿ ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಬೆಂಗಳೂರಿನ ವಿಕಾಸಸೌಧದಲ್ಲಿ ಆಯೋಜಿಸಿದ್ದ ಕಾವೇರಿ ಆರತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಬಾರಿ ಕಾವೇರಿ ಆರತಿ ಆಯೋಜನೆಯಲ್ಲಿ ತೊಡಗಿಸಿಕೊಂಡಿದ್ದ ಅಧಿಕಾರಿ ಮತ್ತು ಸಿಬ್ಬಂದಿಯನ್ನೇ ಬಳಸಿಕೊಂಡು ಸಂಪ್ರದಾಯಬದ್ಧವಾಗಿ, ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಿಎಂ ನಿರ್ದೇಶನದಂತೆ ಕಾವೇರಿ ಆರತಿಯನ್ನು ಅರ್ಥಪೂರ್ಣವಾಗಿ ನೆರವೇರಿಸಬೇಕು. ಈ ಹಿಂದೆ ಅವರೇ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಆರಂಭಿಸಿದ್ದ ಈ ಕಾರ್ಯಕ್ರಮವನ್ನು ಈ ಬಾರಿ ಇನ್ನಷ್ಟು ಅರ್ಥಪೂರ್ಣವಾಗಿ ಆಯೋಜಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕಳೆದ ವರ್ಷ ಮೊದಲ ಬಾರಿಗೆ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಆರಂಭಿಸಲಾಗಿತ್ತು. ಇಂತಹ ಸಾಂಪ್ರದಾಯಿಕ ಆಚರಣೆಗಳು ನಿಲ್ಲಬಾರದು ಎಂಬ ಸದುದ್ದೇಶದಿಂದ ಈ ವರ್ಷವೂ ಮುಂದುವರಿಸಲಾಗುತ್ತಿದೆ. ರಾಜ್ಯದಲ್ಲಿ ಬರ ಮತ್ತು ತಮಿಳುನಾಡು ನೀರು ಹಂಚಿಕೆ ವಿವಾದಗಳಿದ್ದರೂ, ನಾಡಿನ ಸಂಸ್ಕೃತಿಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಕಳೆದ ಬಾರಿಯ ಕಾವೇರಿ ಆರತಿಯ ಮೇಲ್ವಿಚಾರಣೆ ವಹಿಸಿದ್ದ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಮಪ್ರಸಾತ್ ಅವರೊಂದಿಗೆ ವಿಡಿಯೋ ಕಾಲ್ ಮೂಲಕ ಸಮಾಲೋಚನೆ ನಡೆಸಿದ ಸಚಿವರು, ಈ ವರ್ಷವೂ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ 6 ದಿನಗಳ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ರೂಪಿಸುವಂತೆ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವಂತೆ ಕೋರಿದರು. ಅಂತೆಯೇ ಕಾವೇರಿ ಪ್ರತಿಮೆ ನಿರ್ಮಾಣ, ಪೂಜಾ ವಿಧಿವಿಧಾನಗಳು, ವಾರಣಾಸಿಯ ಅರ್ಚಕರ ತಂಡದ ವಾಸ್ತವ್ಯ ಮೊದಲಾದ ವಿವರಗಳನ್ನು ಪರಿಶೀಲಿಸಲಾಯಿತು.

ಅಕ್ಟೋಬರ್ 11ರಿಂದ ಆರಂಭವಾಗಲಿರುವ ಕಾವೇರಿ ಆರತಿ ಒಟ್ಟು 6 ದಿನಗಳ ಕಾಲ ಜರುಗಲಿದೆ. ಅಂತೆಯೇ ಎಲ್ಲ ದಿನವೂ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ಸಂಜೆ, ಹಾಸ್ಯ ಸಂಜೆ ನಡೆಯಲಿದೆ. ಪಾಕಿರ್ಂಗ್ ಸ್ಥಳದಿಂದ ವೇದಿಕೆವರೆಗೂ ಉಚಿತ ಬಸ್ ಸೌಲಭ್ಯ, ಲೋಕೋಪಯೋಗಿ ಇಲಾಖೆಯಿಂದ ರಸ್ತೆ ನಿರ್ಮಾಣ, ವಾರ್ತಾ ಇಲಾಖೆಯಿಂದ ಪ್ರಚಾರ, ಮುಜರಾಯಿ ಇಲಾಖೆಯಿಂದ ಪಂಡಿತರ ನೇಮಕ, ಎಲ್‌ಇಡಿ ಪರದೆಗಳು, ಭವ್ಯ ವೇದಿಕೆ, ಧ್ವನಿ-ಬೆಳಕು ವ್ಯವಸ್ಥೆ, ವಾದ್ಯ, ಪೂಜಾ ಪರಿಕರಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವ್ಯವಸ್ಥಿತವಾಗಿರಬೇಕು. ಯಾವುದೇ ಶಿಷ್ಟಾಚಾರ ಉಲ್ಲಂಘನೆ ಆಗದಂತೆ ಮತ್ತು ಕಳೆದ ಬಾರಿಯ ಲೋಪ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಸಿಎಂ ಆಗಮಿಸುವುದರಿಂದ ’ಡಿ-ಝೋನ್’ ಭದ್ರತಾ ನಿಯಮಗಳ ಪಾಲನೆಯಾಗಬೇಕು. ಜತೆಗೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮುಕ್ತ ಅವಕಾಶ ಕಲ್ಪಿಸಬೇಕು ಎಂದು ನಿರ್ದೇಶಿಸಿದರು.

ಸಭೆಯಲ್ಲಿ ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತೆ ಮಂಜುಶ್ರೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net