ವಿದ್ಯಾರ್ಥಿಗಳಿಗೆ ಶಿಕ್ಷಣ ಒತ್ತಡವಾಗದಿರಲಿ: ಜಿಪಂ ಸಿಇಒ ಕೆ.ಆರ್.ನಂದಿನಿ ಸಲಹೆ

ಮಂಡ್ಯದಲ್ಲಿ ಆಯೋಜಿಸಿದ್ದ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ಕಾರ್ಯಾಗಾರವನ್ನು ಜಿಪಂ ಸಿಇಒ ಕೆ.ಆರ್.ನಂದಿನಿ ಉದ್ಘಾಟಿಸಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ಕಾರ್ಯಾಗಾರವನ್ನು ಜಿಪಂ ಸಿಇಒ ಕೆ.ಆರ್.ನಂದಿನಿ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ವೃತ್ತಿ ಮಾರ್ಗದರ್ಶನ ಅಭಿಯಾನ
  • ನಗರದ ಸಂತಜೋಸೆಫರ ಶಾಲೆಯ ಸಭಾಂಗಣದಲ್ಲಿ ಆಯೋಜನೆ
ಮಂಡ್ಯ: ಇಂದಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಒತ್ತಡವಾಗದೇ ಬದಲಿಗೆ ಪ್ರಭಾವವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಅಭಿಪ್ರಾಯಪಟ್ಟರು.
ನಗರದ ಸಂತಜೋಸೆಫರ ಶಾಲೆಯ ಸಭಾಂಗಣದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಆಯೋಜಿಸಿದ್ದ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಕರಿಯರ್ ಮೇಳ-ವೃತ್ತಿ ಮಾರ್ಗದರ್ಶನ ಅಭಿಯಾನ-ಪ್ರಶಿಕ್ಷಣಾರ್ಥಿಗಳಿಗೆ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲಾ ಹಂತದ ವಿದ್ಯಾರ್ಥಿಗಳಿಗೆ ಅವಕಾಶಗಳ ಪ್ರಪಂಚವನ್ನು ತೆರೆಯಬೇಕು, ಆತ್ಮವಿಶ್ವಾಸ ಹೆಚ್ಚಿಸಬೇಕು, ಕೀಳರಿಮೆ ತೊಲಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದ್ದರೆ, ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡುವ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಗುರಿ ತಲುಪಿಸುವ ಗುರು ನೀವಾಗುತ್ತೀರಿ ಎಂದು ನುಡಿದರು.
ಇಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದೆ. ಆದರಿಂದ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿಯ ಮಾಹಿತಿ ಮತ್ತುಯ ಮಾರ್ಗದರ್ಶನ ನೀಡುತ್ತಿರುವುದು ಉಪಯುಕ್ತವಾಗಿದೆ. ಇದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಲಭಿಸುತ್ತದೆ. ಬಹಳಷ್ಟು ಜನ ಹೇಳುತ್ತಾರೆ, ಮಕ್ಕಳ ಮೇಲೆ ಒತ್ತಡ ಹೇರಬಾರದು. ಒತ್ತಡ ಬೇರೆ, ಪ್ರಭಾವವೇ ಬೇರೆ. ಇಂದಿನ ವಿದ್ಯಾರ್ಥಿಗಳಿಗೆ ಪ್ರಭಾವನಾದರೂ ನಾವು ಬೀರಬೇಕು. ಆಗ ಮಕ್ಕಳ ಮನಸ್ಸು ಜಾಗೃತಗೊಳ್ಳುತ್ತದೆ ಎಂದು ಎಚ್ಚರಿಸಿದರು.
ಇತ್ತೀಚೆಗೆ ಕೃತಕ ಬುದ್ಧಿಮತ್ತೆ(ಎಐ) ಎಲ್ಲ ಕಡೆ ಆವರಿಸಿಕೊಳ್ಳುತ್ತಿದೆ. ಎಐ ತಂತ್ರಜ್ಞಾನ ಹೆಚ್ಚಾಗುತ್ತಿದೆ. ಆದರೆ ಮೌಲ್ಯಗಳನ್ನು, ಕನಸು, ಗುರಿಗಳನ್ನು ಎಐ ತಂತ್ರಜ್ಞಾನ ಕಲಿಸಲ್ಲ. ಇದನ್ನು ಗುರುಗಳು, ಶಿಕ್ಷಕವೃಂದ ಮಾಡಬೇಕಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರಿಯಾದ ಮಾಹಿತಿ ಮತ್ತು ಸೂಕ್ತ ಮಾರ್ಗದರ್ಶನವು ಯುವಜನತೆಯ ಯಶಸ್ಸಿನ ಮೂಲಸ್ತಂಭ. ಹಲವಾರು ಬಾರಿ ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಸಾಮರ್ಥ್ಯ ಮತ್ತು ಅವಕಾಶಗಳ ಕುರಿತು ಸರಿಯಾದ ತಿಳಿವಳಿಕೆ ಇಲ್ಲದ ಕಾರಣ ಸೂಕ್ತ ವೃತ್ತಿ ಆಯ್ಕೆ ಮಾಡಲು ಸಂಕಷ್ಟ ಅನುಭವಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಈ ರೀತಿಯ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳು ಅತ್ಯಂತ ಉಪಯುಕ್ತವಾಗುತ್ತವೆ ಎಂದು ತಿಳಿಸಿದರು.
ಡಿಡಿಪಿಐ ಲೋಕೇಶ್, ಡಿಡಿಪಿಯು ಸಿ.ಚಲುವಯ್ಯ, ಡಯಟ್ ಪ್ರಾಂಶುಪಾಲ ಯೋಗೇಶ್, ಸಂತಜೋಸೆಫರ ಶಾಲೆ ಆಡಳಿತಾಧಿಕಾರಿ ಸಿಸ್ಟರ್ ಸ್ಟೇಲಾ ವೀಣಾ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹದೇವು, ಸೌಭಾಗ್ಯಾ, ರಾಜಶೇಖರ್, ಮಹೇಶ್, ಪ್ರಶಾಂತಕುಮಾರ್, ಎಚ್.ಎಂ.ಮರಿದೇವರು, ಬಿ.ಜಿ.ನಾಗರಾಜು, ನೋಡಲ್ ಅಧಿಕಾರಿ ತೆಹರಾ ಇತರರಿದ್ದರು.
ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ರಾಜಲಕ್ಷ್ಮ್ಮೀ ಮೈಸೂರು, ಜಿಲ್ಲಾ ಕೌಶಲಾಭಿವೃದ್ದಿ ಮತ್ತು ಜೀವನೋಪಾಯ ಇಲಾಖೆ ಅಧಿಕಾರಿ ನಾಗನಂದ್ ಉಪನ್ಯಾಸ ನೀಡಿದರು. ಐಟಿಐ ವಿದ್ಯಾರ್ಥಿಗಳು ಮಾದರಿ ಪ್ರದರ್ಶಿಸಿದರು. ವಿವಿಧ ಇಲಾಖೆಗಳಿಂದ ವಸ್ತು ಪ್ರದರ್ಶನ ಮತ್ತು ಮಾಹಿತಿಯ ಮಳಿಗೆ ತೆರೆಯಲಾಗಿತ್ತು. ಜಿಲ್ಲೆಯ ಎಲ್ಲ ತಾಲೂಕಿನಿಂದ ಸುಮಾರು 2,500 ಪಾಲಕರು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net