ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಎಂ.ಶ್ವೇತಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿನ ಬದಲಾದ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ಕ್ಯಾನ್ಸರ್ ರೋಗ ಹೆಚ್ಚಾಗುತ್ತಿದೆ. ಅದೂ ಮಹಿಳೆಯರಲ್ಲಿ ಅಧಿಕವಾಗಿ ಬೆಳವಣಿಗೆಯಾಗುತ್ತಿದೆ. ಫಾಸ್ಟ್‌ಫುಡ್, ಜಂಕ್‌ಫುಡ್, ಅತಿಹೆಚ್ಚು ರಾಸಾಯನಿಕ ಗೊಬ್ಬರ ಬಳಕೆಯ ಬೆಳೆ ಹಾಗೂ ಆಹಾರ ಪದಾರ್ಥಗಳಿಂದ ಕ್ಯಾನ್ಸರ್ ಅಂಶಗಳು ಕಂಡುಬಂದಿವೆ. ದಿನನಿತ್ಯದ ಆಹಾರ ಪದ್ಧತಿಯಲ್ಲಿ ಸೊಪ್ಪು, ನಾರಿನಾಂಶ, ಹಸಿರು ತರಕಾರಿ ಸೇವನೆ ಕಡಿಮೆಯಾಗಿದೆ. ವ್ಯಾಯಾಮ, ದುಡಿಮೆ ಇಲ್ಲದಾಗಿದೆ, ಸಕ್ಕರೆ ಬಳಕೆ ಹೆಚ್ಚಾಗಿದೆ. ಮಹಿಳೆಯರಲ್ಲಿ ಸ್ತನಕ್ಯಾನ್ಸರ್, ಗರ್ಭಕಂಠ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಮುಟ್ಟಿನ ಸಮಸ್ಯೆಯುಳ್ಳವರು ಮತ್ತು 30 ವರ್ಷ ಮೇಲ್ಪಟ್ಟ ಮಹಿಳೆಯರು ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಉತ್ತಮ ಎಂದರು.